ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ: ಸಿದ್ದರಾಮಯ್ಯ ಕೊಟ್ಟ ಕಾರಣವೇನು?
Tumkurnews
ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಯಾವತ್ತಾದರೂ ಒಂದು ಪ್ರಕರಣವಾದರೂ ಸಿಬಿಐಗೆ ಕೊಟ್ಟಿದ್ದಾರಾ? ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಒಂದಂಕಿ ಲಾಟರಿ ಪ್ರಕರಣ, ಸಚಿವರಾದ ಕೆ.ಜೆ. ಜಾರ್ಜ್ ಅವರ ಮೇಲಿನ ಆರೋಪ, ಪರೇಶ್ ಮೇಸ್ತಾ ಸಾವಿನ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು.
ಹಿಂದೆ ಬಿಜೆಪಿಯವರೇ ಸಿಬಿಐ ಯನ್ನು ಕರಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬಣ್ಣಿಸಿದ್ದಾರೆ. ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಎಂದು ಹೇಳಿದ್ದರು. ಈಗ ಸಿಬಿಐ ಮೇಲೆ ಅವರಿಗೆ ವಿಶ್ವಾಸ ಬಂತಾ? ನನಗೆ ಸಿಬಿಐ ಮೇಲೆ ವಿಶ್ವಾಸವಿದೆ. ಆದರೆ, ನಮ್ಮ ಪೊಲೀಸರ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ.
ನಮ್ಮ ಸರ್ಕಾರ ಕಾನೂನು ರೀತ್ಯ ನಡೆಯುತ್ತಿರುವ ಕೆಲಸದಲ್ಲಿ, ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಾರೆಂದು ನಂಬಿದ್ದೇನೆ. ನಾನು ಯಾವತ್ತೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ತನಿಖೆಯ ಅಗತ್ಯವಿಲ್ಲ. ಎಲ್ಲ ಅಪರಾಧ ಪ್ರಕರಣಗಳ ತನಿಖೆ ಯಾರು ಮಾಡುತ್ತಾರೆ? ನಮ್ಮ ಪೊಲೀಸರಲ್ಲವೇ? ಅವರದ್ದೇ ವಿಶೇಷ ತನಿಖಾದಳ ರಚಿಸಿರುವುದಲ್ಲವೇ? ನಮ್ಮ ಪೊಲೀಸರನ್ನು ನಾವು ನಂಬಬೇಕಲ್ಲವೆ?
ಪ್ರಜ್ವಲ್ ರೇವಣ್ಣನವರ ಮಹಿಳಾ ದೌರ್ಜನ್ಯ ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲೀ, ಸರ್ಕಾರದ ಯಾರೊಬ್ಬರೂ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೆ ಎಸ್.ಐ.ಟಿ. ಮೇಲೆ ವಿಶ್ವಾಸವಿದೆ. ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
 
                                             
                                             
                                             
                                             
                                             
                                             
                                             
                                            
 
                                     
                                     
                                     
                                     
                


 
                                     
                                     
                                     
                                                         
                                
                        
+ There are no comments
Add yours