ತುಮಕೂರು: ಡಾ: ಬಾಬು ಜಗಜೀವನರಾಂ ವೃತ್ತ ಅಭಿವೃದ್ಧಿಗೆ ಸಿದ್ಧತೆ: ಜಿಲ್ಲಾಧಿಕಾರಿ

1 min read

 

ಡಾ: ಬಾಬು ಜಗಜೀವನರಾಂ ವೃತ್ತ ಅಭಿವೃದ್ಧಿಗೆ ಸಿದ್ಧತೆ

Tumkurnews
ತುಮಕೂರು: ನಗರದ ಕೋತಿ ತೋಪು ಪ್ರದೇಶದಲ್ಲಿರುವ ಡಾ: ಬಾಬು ಜಗಜೀವನರಾಂ ವೃತ್ತದ ಅಭಿವೃದ್ಧಿಗೆ ಈಗಾಗಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಬಾಬು ಜಗಜೀವನರಾಂ ಅವರ 118ನೇ ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಶನಿವಾರ ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಗರದ ಕೋತಿತೋಪು ಪ್ರದೇಶದಲ್ಲಿ ಬಾಬು ಜಗಜೀವನರಾಂ ವೃತ್ತವನ್ನು ಅಭಿವೃದ್ಧಿಪಡಿಸಲು ಪಾಲಿಕೆ ಈಗಾಗಲೇ ಕಾರ್ಯಗತವಾಗಿದೆ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೂ ಸರ್ಕಾರದಿಂದ ಉತ್ತಮ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲಿಯೇ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಜಿಲ್ಲಾಡಳಿತ ಅಣಿಯಾಗುತ್ತಿದೆ ಎಂದು ತಿಳಿಸಿದರು.

ತುಮಕೂರು: ಲಂಚ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ರೈತರು
ಡಾ|| ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಅವರಂತಹ ಮಹನೀಯರ ಮಾರ್ಗದಲ್ಲಿ ನಾವು ನಡೆಯಬೇಕು. ತಳ ಸಮುದಾಯಗಳಿಗಾಗಿ ಅವರ ಶ್ರಮವನ್ನು ಸ್ಮರಿಸಬೇಕು. ಹಿಂದುಳಿದ, ದಲಿತ, ಮಹಿಳೆಯರು, ಮಕ್ಕಳು, ರೈತ ಸಮುದಾಯ ಅಭಿವೃದ್ಧಿಯಾಗಬೇಕೆಂಬ ಅವರ ಮಹದಾಶೆಯನ್ನು ನಾವೆಲ್ಲ ಒಟ್ಟಾಗಿ ಈಡೇರಿಸುವ ಪ್ರಯತ್ನ ಮಾಡಬೇಕು, ಜಗಜೀವನರಾಂ ಅವರ ಆಶಯದಂತೆ ಜಿಲ್ಲಾಡಳಿತದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಾಬೂಜಿ ಅವರು ತಮಗೆ ದೊರೆಯದ ಸೌಲಭ್ಯಗಳು ಇತರರಿಗೂ ವಿಶೇಷವಾಗಿ ದಲಿತರು ಹಾಗೂ ಬಡವರಿಗೆ ದೊರಕಿಸಬೇಕೆಂಬ ನಿಟ್ಟಿನಲ್ಲಿ ಹೋರಾಡಿದರು. ಅವರ ಆಡಳಿತಾವಧಿಯಲ್ಲಿ ದೀನ ದಲಿತರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅವರ ಆದರ್ಶಗಳು, ವಿಚಾರಧಾರೆಗಳು ಇಂದಿಗೂ ಪ್ರೇರಣೆಯಾಗಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಭಾರತದ ಇತಿಹಾಸದಲ್ಲಿ ಬಾಬೂಜಿ ಅವರು ಕೃಷಿ, ರೈಲ್ವೆ, ಕಾರ್ಮಿಕ, ರಕ್ಷಣಾ, ಸಾರಿಗೆ ಸೇರಿದಂತೆ ವಿವಿಧ ಖಾತೆಗಳ ಕೇಂದ್ರ ಸಚಿವರಾಗಿ, ಉಪ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ದಾಖಲೆಯನ್ನು ಹೊಂದಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಸುಮಾರು 30 ವರ್ಷಗಳ ಕಾಲ ವಿವಿಧ ಇಲಾಖೆಗಳ ಖಾತೆಗಳನ್ನು ನಿರ್ವಹಿಸಿ ಸದೃಢ ಆಡಳಿತ ನೀಡಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ದೇಶದಲ್ಲಿ ಬರಗಾಲ ಸಮಯದಲ್ಲಿ ಉದ್ಭವಿಸಿದ್ದ ಆಹಾರದ ಬಿಕ್ಕಟ್ಟನ್ನು ನಿಭಾಯಿಸಿದರು. ಹಸಿರುಕ್ರಾಂತಿ ಮೂಲಕ ಭಾರತದ ಕೃಷಿಯನ್ನು ಆಧುನೀಕರಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ದಲಿತರ ಸಮಾನತೆ ಸಾಧಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರ ನಡೆ ನಮಗೆಲ್ಲ ಆದರ್ಶವಾಗಬೇಕು. ತಳ ಸಮುದಾಯದವರನ್ನು ಮೇಲೆತ್ತುವ ಅವರ ಕಳಕಳಿ ಮೆಚ್ಚುವಂತಹದ್ದು ಎಂದು ಬಣ್ಣಿಸಿದರು.
ಮೂಲಭೂತ ಶಿಕ್ಷಣ ವ್ಯವಸ್ಥೆಗೆ ಅವರ ಮೊದಲ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೂಲಭೂತ ಶಿಕ್ಷಣ ನೀಡಲು ಸರ್ಕಾರದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ಹಿಂದಿಕ್ಕಿ ಸರ್ಕಾರಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದು ತಿಳಿಸಿದರು. ಬಾಬೂಜಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಸಂಕಲ್ಪ ಮಾಡುವ ಮೂಲಕ ಅವರ ಜಯಂತಿ ಸುದಿನಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು. ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಹಿಂದುಳಿದ ವರ್ಗಗಳ ಏಳಿಗೆಯೊಂದಿಗೆ ಕಾರ್ಮಿಕರ ಶ್ರೇಯೋಭಿವೃದ್ಧಿಯೂ ಬಾಬೂಜಿಯವರ ಮೂಲ ಮಂತ್ರವಾಗಿತ್ತು. ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ, ಕರ್ತವ್ಯದ ಅವಧಿ ನಿಗಧಿ ಬಗ್ಗೆ ಕಾಳಜಿ ಹೊಂದಿದ್ದರು. ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದು ತಿಳಿಸಿದರು. ಪಾಲಿಕೆಯಲ್ಲಿಯೂ ಸಹ ಕಾರ್ಮಿಕರ ಕುಟುಂಬಗಳಿಗೆ ಸಾಲ ಒದಗಿಸುವುದು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಸಾರ್ಥಕವಾಗಿ ಬದುಕಿ ತಳಸಮುದಾಯದವರ ಏಳಿಗೆಗಾಗಿ ಶ್ರಮಿಸುವ ಮೂಲಕ ತಮ್ಮ ಧ್ಯೆಯೋದ್ದೇಶಗಳನ್ನು ಮುಂದಿನ ಪೀಳಿಗೆಗಾಗಿ ಬಿಟ್ಟು ಹೋಗಿರುವವರಲ್ಲಿ ಬಾಬೂಜಿಯವರೂ ಒಬ್ಬರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೀಸಲಾತಿ ಇಲ್ಲದ ಅವಧಿಯಲ್ಲಿ ಶಿಕ್ಷಣ ಪಡೆದು ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದರೂ ಉಪಪ್ರಧಾನಿಯಂತಹ ಉನ್ನತ ಸ್ಥಾನಕ್ಕೆ ಏರಿದ ಛಲಗಾರ. ಪ್ರತಿಯೊಬ್ಬರೂ ತಮ್ಮಲ್ಲಿಯ ಬುದ್ಧಿಶಕ್ತಿಯನ್ನು ಉಪಯೋಗಿಸಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡು ಬಾಬೂಜಿ ಅವರ ಹಾದಿಯಲ್ಲಿ ಸಾಗಿದರೆ ಗೆಲುವು ನಿಶ್ಚಿತವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಂಜೀವಪ್ಪ, ತಹಶೀಲ್ದಾರ್ ರಾಜೇಶ್ವರಿ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಮುಖಂಡರು, ಮತ್ತಿತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours