ಕರ್ನಾಟಕ ಬಂದ್: ತುಮಕೂರಿನಲ್ಲಿ ಹೇಗಿದೆ?
Tumkur news
ತುಮಕೂರು: ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್’ಗೆ ನಗರದಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ.
ನಗರದ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಎಂದಿನಂತೆ ಇತ್ತಾದರೂ ಬಸ್’ಗಳ ಸಂಖ್ಯೆ ವಿರಳವಾಗಿತ್ತು. ನಗರ ಸಾರಿಗೆ ಹಾಗೂ ಹೊರ ಜಿಲ್ಲೆಗೆ ಪ್ರಯಾಣಿಸುವ ಬಸ್’ಗಳು ಕಡಿಮೆ ಸಂಖ್ಯೆಯಲ್ಲಿ ಇದ್ದವು. ಹೀಗಾಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದ್ದದ್ದು ಕಂಡು ಬಂದಿತು.
ಖಾಸಗಿ ಬಸ್’ಗಳ ಸಂಚಾರದಲ್ಲೂ ಯಾವುದೇ ಅಡಚಣೆ ಇರಲಿಲ್ಲ. ಮಧುಗಿರಿ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಬಸ್ ಸಂಚಾರ ಎಂದಿನಂತೆಯೇ ಇತ್ತು. ಆದರೆ ಬಂದ್ ಕರೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹಾಗೂ ಪ್ರಯಾಣಿಕರ ಓಡಾಟ ಎಂದಿನಂತೆ ಇರಲಿಲ್ಲ.
ಉಳಿದಂತೆ ತುಮಕೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬೀದಿಬದಿ ವ್ಯಾಪಾರಿಗಳು, ಎಂಜಿ ರಸ್ತೆ, ಬಿ.ಎಚ್ ರಸ್ತೆಯ ವರ್ತಕರು ಎಂದಿನಂತೆ ಮಳಿಗೆ ತೆರೆದಿರುವುದು ಕಂಡು ಬಂದಿತು.
ನಗರದ ಬಹುದೊಡ್ಡ ಸಾರಿಗೆಯಾದ ಆಟೊಗಳು ಎಂದಿನಂತೆ ಓಡಾಡುವುದು ಕಾಣ ಸಿಕ್ಕಿತು. ಮುಂಜಾಗ್ರತಾ ಕ್ರಮವಾಗಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ಟೌನ್ ಹಾಲ್ ಸರ್ಕಲ್ ಮತ್ತಿತರ ಕಡೆಗಳಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಿರುವುದು ಕಂಡು ಬಂದಿತು. ಶಾಲಾಕಾಲೇಜುಗಳಿಗೆ ಯಾವುದೇ ರಜೆ ಘೋಷಣೆ ಮಾಡಿಲ್ಲ. ಒಟ್ಟಾರೆಯಾಗಿ ಬಂದ್’ಗೆ ಯಾವುದೇ ಪ್ರತಿಕ್ರಿಯೆ ದೊರೆಯದಿರುವುದು ಕಂಡು ಬಂದಿತು.
+ There are no comments
Add yours