ಲಂಚ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು!
ಅಧಿಕಾರಿಗಳ ವಿರುದ್ಧ ಫಲಾನುಭವಿಗಳ ಆಕ್ರೋಶ
Tumkur news
ತುಮಕೂರು: ಮೀನುಗಾರಿಕೆ ಇಲಾಖೆಯಿಂದ ಕಾರ್ಯಾದೇಶ ಪಡೆದು ಮೀನುಗಾರಿಕಾ ಘಟಕಗಳನ್ನು ನಿರ್ಮಿಸಿ ಎರಡು ವರ್ಷ ಅಲೆದಾಟ ಮಾಡಿದರು ಸಹಾಯಧನ ಬಿಡಯಗಡೆಯಾಗದೆ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಧನ ಬಿಡುಗಡೆಯಾಗುತ್ತದೆ ಎಂದು ನಂಬಿಕೊಂಡು ಸಾಲ ಸೋಲ ಮಾಡಿ ವಿವಿಧ ಘಟಕಗಳನ್ನು ನಿರ್ಮಿಸಿ ಎರಡು ವರ್ಷಗಳೇ ಕಳೆಯುತ್ತ ಬಂದಿದೆ. ಈ ಬಗ್ಗೆ ನೂರಾರು ಬಾರಿ ಪತ್ರ ನೀಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಿಲ್ಲಾಡಳಿತ, ಇಲಾಖೆ ಲಂಚ ಬೇಕಿದ್ದರೆ ಬಹಿರಂಗವಾಗಿ ಕೇಳಲಿ ನಾವು ಕೊಡಲು ಸಿದ್ಧರಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿಯವರಿಗೆ ಮತ್ತೊಮ್ಮೆ ಪತ್ರ ನೀಡಿ ಮಾತನಾಡಿದ ರೈತ ಸಂಘದ ಪರಮಶಿವಯ್ಯ,
ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡದೇ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಈಗಾಗಲೇ ಸಾಲ ಸೋಲ ಮಾಡಿ ವಿವಿಧ ಘಟಕಗಳನ್ನು ನಿರ್ಮಿಸಿ ಕೈ ಕಟ್ಟಿ ಕೂರುವಂತಾಗಿದೆ. ಕಮಿಷನ್ ಹಣ ಅಥವಾ ಲಂಚ ಬೇಕಿದ್ದರೆ ಅಧಿಕಾರಿಗಳು ರಾಜಾರೋಷವಾಗಿ ಕೇಳಲಿ ಅದಕ್ಕೆ ನಾವು ರೈತರಿಂದ ಲಂಚದ ಹಣ ಸಂಗ್ರಹಿಸಿ ನಾವು ಕಮಿಷನ್ ಕೊಡಲು ಸಿದ್ಧರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ, ಜ್ಞಾನಸಿಂಧುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ವಿವಿಧ ಘಟಕಗಳು ನಿರ್ಮಿಸಿ ಎರಡು ವರ್ಷವಾದರೂ ರೈತರಿಗೆ ಸಹಾಯಧನ ಬಿಡುಗಡೆ ಮಾಡದೇ ಇರುವುದರಿಂದ ರೈತರು ಸಾಕಷ್ಟು ಕೈ ಸಾಲ, ಫೈನಾನ್ಸ್ ಸಾಲ ಪಡೆದು ಒಡವೆಗಳನ್ನು ಅಡ ಇಟ್ಟು ನರಳಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಹ ವಿನಾಕಾರಣ ವಿಳಂಭ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲಾ ಜಿಲೆಗಳಲ್ಲಿ ಜಿಲ್ಲಾಧಿಕಾರಿಗಳು ಅನುಮೋದನೆ ಕೊಟ್ಟು ಸಹಾಯಧನ ಬಿಡುಗಡೆ ಮಾಡಿ ಒಂದೂವರೆ ತಿಂಗಳಾಗಿದೆ. ಆದರೆ, ತುಮಕೂರು ಜಿಲ್ಲೆಯಲ್ಲಿ ಮಾತ್ರ ಸಹಾಯಧನ ಬಿಡುಗಡೆ ಮಾಡದೆ ರೈತರನ್ನು ಮತ್ತು ಮತ್ಸೃ ಕೃಷಿ ನಂಬಿ ಬದುಕುತ್ತಿರುವವರಿಗೆ ವಿನಾಕಾರಣ ತೊಂದರೆ ಮಾಡುತ್ತಿದ್ದು, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಏನಾದರೂ ಅನಾಹುತ ಆದಲ್ಲಿ ನೇರ ಹೊಣೆ ಜಿಲ್ಲಾಧಿಕಾರಿಗಳದೇ ಆಗಿರುತ್ತದೆ ಎಂದು ದೂರಿದರು.
ಇದೇ ತಿಂಗಳ 15 ರಂದು ಮಡಿಕೆ ಹುಂಡಿಯಲ್ಲಿ ರೈತರಿಂದ ಹಣ ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಮಿಷನ್ ಲಂಚದ ಹಣ ತಲುಪಿಸಲಾಗುವುದು ಅಷ್ಟರೊಳಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ರೈತರಿಗೆ ಬಿಡುಗಡೆಯಾಗಬೇಕಾದ ಅನುದಾನವನ್ನು ರೈತರ ಬ್ಯಾಂಕ್ ಖಾತೆಗೆ ಹಾಕಬೇಕು ಎಂದು ತಿಳಿಸಿದರು.
ಪದೇಪದೆ ನೂರಾರು ಬಾರಿ ಕಚೇರಿಗೆ ಅಲೆಯಲೂ ದುಡ್ಡಿಲ್ಲ. ಫಲಾನುಭವಿಗಳ ಪಾಲಿನ ಹಣ ಬಿಡುಗಡೆ ಮಾಡುವಂತೆ ಕಳೆದ ತಿಂಗಳಿನಿಂದ ಮೇಲಿಂದ ಮೇಲೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಪತ್ರಗಳನ್ನು ಸಲ್ಲಿಸಿದರೂ ಸೌಜನ್ಯಕ್ಕೂ ಗಂಭೀರವಾಗಿ ಪರಿಶೀಲಿಸಿಲ್ಲ. ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಒಂದು ಅನುದಾನದ ಹಣ ಪಡೆಯಲು ಪದೇಪದೆ ಕಚೇರಿಗೆ ಅಲೆದು ಅಲೆದು ರೈತರ ಚಪ್ಪಲಿ ಸವೆದಿವೆ. ರೈತರ ಜೇಬಲ್ಲಿ ಹಣ ಖಾಲಿಯಾದರೂ ಸಹ ಅಧಿಕಾರಿಗಳು ದಪ್ಪದ ಚರ್ಮ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಈಗಾಗಲೇ ಈ ಅನುದಾನ ಬಿಡುಗಡೆಗೆ ಕುರಿತಂತೆ ಕಮಿಟಿ ರಚನೆ ಮಾಡಿ ರೈತರ ಘಟಕಗಳಿಗೆ ಭೇಟಿ ನೀಡಿದ್ದಾರೆ ಇನ್ನೂ ಕೆಲವು ದಿನಗಳಲ್ಲಿ ಈ ರೈತರಿಗೆ ಅನುದಾನ ಸಿಗದೇ ಹೋದರೆ ಮತ್ತೆ ರೈತರು ಮುಂದಿನ ವರ್ಷದವರೆಗೆ ಕಾಯಬೇಕು .
ಸಾಲ ಸೋಲ ಮಾಡಿ ವಡವೆ ಒತ್ತೆ ಇಟ್ಟು ನಿರ್ಮಿಸಿರುವ ಈ ಘಟಕಗಳು ಕಾರ್ಯನಿರ್ವಿಹಿಸದೇ ಹೋದರೆ ರೈತರ ಬದುಕು ಬೀದಿಗೆ ಬರುತ್ತದೆ ಎಂದರು.
ರೈತರಾದ ಮುಕುಂದಪ್ಪ, ಪ್ರಜ್ವಲ್, ಶ್ರೀನಿವಾಸ್, ನವೀನ್ ಮುಂತಾದ ರೈತರು ಈ ಸಂದರ್ಭದಲ್ಲಿ ಇದ್ದರು.
+ There are no comments
Add yours