ಎತ್ತಿನಹೊಳೆ: ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಲು ಸೂಚನೆ
Tumkur news
ತುಮಕೂರು: ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಜಿ. ಪರಮೇಶ್ವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎತ್ತಿನಹೊಳೆ, ರೈಲ್ವೆ, ಹೇಮಾವತಿ, ಕೆಐಎಡಿಬಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ಈವರೆಗೂ 2679 ಎಕರೆ ಭೂಸ್ವಾಧೀನವಾಗಿದ್ದು, ಯೋಜನೆಗೆ ಅವಶ್ಯವಿರುವ ಉಳಿದ 438 ಎಕರೆ ಭೂಮಿಯನ್ನು 4 ತಿಂಗಳೊಳಗಾಗಿ ಸ್ವಾಧೀನಪಡಿಸಿಕೊಂಡು ಎತ್ತಿನ ಹೊಳೆ ಯೋಜನೆಗೆ ಹಸ್ತಾಂತರಿಸಬೇಕೆಂದು ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಜಿ.ಎನ್. ಅವರಿಗೆ ಸೂಚನೆ ನೀಡಿದರು.
ಲಭ್ಯವಿರುವ ಅನುದಾನವನ್ನು ಭೂಮಾಲೀಕರಿಗೆ ಪಾವತಿಸಿ ಎತ್ತಿನ ಹೊಳೆ ಯೋಜನೆಯನ್ನು ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮುರಳೀಧರ್ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಎತ್ತಿನ ಹೊಳೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮುರಳೀಧರ್ ಸಚಿವರಿಗೆ ಮಾಹಿತಿ ನೀಡುತ್ತಾ, ಯೋಜನೆಯಡಿ ಜಿಲ್ಲೆಯಲ್ಲಿ 150 ಕಿ.ಮೀ. ಗುರುತ್ವಾ ಕಾಲುವೆಯನ್ನು ಹೊಂದಿದ್ದು, ಇದರಲ್ಲಿ 115 ಕಿ.ಮೀ.ವರೆಗಿನ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಉಳಿದ 24 ಕಿ.ಮೀ.ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 3 ಕಡೆ ಅರಣ್ಯ ಪ್ರದೇಶದ ಸಮಸ್ಯೆಯಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ರೈಲ್ವೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರು: ನಿಗದಿತ ಸಮಯಕ್ಕೆ ಕಚೇರಿ ಕೆಲಸಕ್ಕೆ ಹಾಜರಾಗಿ: ಜಿಲ್ಲಾಧಿಕಾರಿ ಸೂಚನೆ
+ There are no comments
Add yours