ತುಮಕೂರು: ಜಿಲ್ಲೆಯ ಎಲ್ಲಾ ವಿಎಒಗಳು ಸಾಮೂಹಿಕ ರಜೆ: ಪ್ರತಿಭಟನೆ

1 min read

 

ತುಮಕೂರು: ಜಿಲ್ಲೆಯ ಎಲ್ಲಾ ವಿಎಒಗಳು ಸಾಮೂಹಿಕ ರಜೆ: ಪ್ರತಿಭಟನೆ

Tumkur news
ತುಮಕೂರು: ಕಂದಾಯ ಇಲಾಖೆಯ ಆಧಾರ ಸ್ತಂಭಗಳಾಗಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ, ಕಾಲ ಕಾಲಕ್ಕೆ ಬಡ್ತಿ, ಕೆಲಸದ ಸಮಯದಲ್ಲಿ ಭದ್ರತೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆಯ ಮೇರೆಗೆ ಎಲ್ಲಾ ವಿಎಓ ಗಳು ಕೆಲಸಕ್ಕೆ ಸಾಮೂಹಿಕ ರಜೆ ಹಾಕಿದ್ದು, ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಪ್‍ಗಳನ್ನು ಅನ್ ಇಸ್ಟಾಲ್ ಮಾಡಿ, ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಗುಣಮಟ್ಟದ ಪೀಠೋಪಕರಣ, ಗುಣಮಟ್ಟದ ಮೊಬೈಲ್, ಅದಕ್ಕೆ ಬೇಕಾದ ಸಿಮ್ ಮತ್ತು ಡಾಟಾ, ಲ್ಯಾಪ್ ಟಾಪ್ ಮತ್ತು ಪ್ರಿಂಟರ್’ಗಳನ್ನು ನೀಡಬೇಕು, ವಿಎಓ ಹುದ್ದೆಗಳಿಗೆ ತಾಂತ್ರಿಕ ಹುದ್ದೆಗಳಿಗೆ ಸಮಾನವಾದ ವೇತನ ಶ್ರೇಣಿ ನಿಗದಿ ಪಡಿಸಬೇಕು ಅಂತರಜಿಲ್ಲಾ ವರ್ಗಾವಣೆ, ಬಡ್ತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ 03-10-2024ರ ಸರಕಾರದ ಮುಖ್ಯ ಕಾರ್ಯದರ್ಶಿ ನೀಡಿದ ಭರವಸೆ ಈಡೇರಿಸಬೇಕೆಂದು ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧೀಕ್ಷಕರಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷ ಎಸ್.ದೇವರಾಜು, ಗ್ರಾಮ ಆಡಳಿತ ಅಧಿಕಾರಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ 26-09-20274 ರಿಂದ 03-10-2024ರವರೆಗೆ ಮೊದಲ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿತ್ತು. 03-10-2024 ರಂದು ಅಂದಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ನಮ್ಮೊಂದಿಗೆ ಮಾತನಾಡಿ, ಬೇಡಿಕೆಗಳನ್ನು ಬಗೆಹರಿಸುವ ಭರವಸೆ ನೀಡಿದ ನಂತರ ಮುಷ್ಕರ ವಾಪಸ್ ಪಡೆಯಲಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಸರಕಾರ ಕೆಲಸ ಸಣ್ಣ, ಪುಟ್ಟ ಬೇಡಿಕೆಗಳನ್ನು ಈಡೇರಿಸಿ, ಪ್ರಮುಖ ಬೇಡಿಕೆಗಳ ಕಡೆಗೆ ಗಮನವನ್ನೇ ಹರಿಸಿಲ್ಲ. ರೈತರು, ಸಾರ್ವಜನಿಕರೊಂದಿಗೆ ನೇರವಾಗಿ ಕೆಲಸ ಮಾಡುವ ನಮಗೆ ಒಂದು ಕಚೇರಿಯಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವಾಗ ಶಾಲೆಯ ಜಗಲಿ, ಇಲ್ಲವೇ ಅರಳೀಮರದ ಕಟ್ಟೆ ಇಂತಹ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡಬೇಕಾಗಿದೆ. ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯವೂ ಇಲ್ಲ. ಅಲ್ಲದೆ ರಕ್ಷಣೆ ಎಂಬುದೇ ಇಲ್ಲವಾಗಿದೆ. ವಿವಾದ ವಿರುವ ಭೂಮಿಗಳ ದುರಸ್ತಿಯಂತಹ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಎಲ್ಲಾ ವೃತ್ತಗಳಲ್ಲಿಯೂ ಸುಸಜ್ಜಿತ ಕಚೇರಿ, ಕಚೇರಿಗೆ ಅಗತ್ಯವಿರುವ ಪೀಠೋಪಕರಣ, ಕೆಲಸಗಾರರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹಗಲಿರುಳೆನ್ನದೆ ಕೆಲಸ ಮಾಡುತಿದ್ದು, ಇವರ ಸಾಂಸಾರಿಕ ಜೀವನ ಚೆನ್ನಾಗಿರಬೇಕು ಎಂದರೆ, ಕೆಸಿಎಸ್‍ಆರ್ ನಿಯಮಕ್ಕೆ 16 ಎ ಕಲಂ 2ಗೆ ತಿದ್ದುಪಡಿ ತಂದು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಅನುಕಂಪದ ಆಧಾರದಲ್ಲಿ ಕೆಲಸ ನೀಡುವ ವೃಂದ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಬೇಕು. ಕರ್ತವ್ಯದ ಸಂದರ್ಭದಲ್ಲಿ ಜೀವ ಹಾನಿಗೆ ಒಳಗಾಗುವ ಕುಟುಂಬಕ್ಕೆ ಐವತ್ತು ಲಕ್ಷ ರೂ ಪರಿಹಾರ ನೀಡಬೇಕು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎರಡನೇ ಹಂತದ ಮುಷ್ಕರ ಇಂದಿನಿಂದ ಆರಂಭಗೊಂಡಿದೆ. ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಯುತ್ತಿದ್ದು, ಸರಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈಡೇರಿಸಬೇಕೆಂದು ಎಸ್.ದೇವರಾಜು ಆಗ್ರಹಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಖ್ಯಸ್ಥರಿಗೆ ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ತುಮಕೂರು ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಎನ.ರವಿಕುಮಾರ್, ಎನ್.ಜಿ.ಪುರುಷೋತ್ತಮ್, ಖಜಾಂಚಿ ರಾಘವೇಂದ್ರಸ್ವಾಮಿ, ಗೌರವಾಧ್ಯಕ್ಷ ಹೇಮಂತಕುಮಾರ್, ತಾಲೂಕು ಅಧ್ಯಕ್ಷರುಗಳಾದ ಕಲ್ಲೇಶ್, ಸುಮತಿ, ರವಿಕುಮಾರ್, ಜಗಧೀಶ್, ಬಸವರಾಜು, ರಾಜೇಶ್, ನವೀನ್‍ಕುಮಾರ್, ಕಾಂತರಾಜು, ವೆಂಕಟೇಶ್, ಪ್ರಸನ್ನಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours