ಮನ್ನಾ ಆಗುತ್ತೆ ಮೈಕ್ರೋ ಫೈನಾನ್ಸ್ ಸಾಲ! ಸರ್ಕಾರದ ಸುಗ್ರಿವಾಜ್ಞೆ’ಯಲ್ಲಿ ಏನಿದೆ?
Tumkur news
ತುಮಕೂರು: ಮನ್ನಾ ಆಗುತ್ತಾ ಮೈಕ್ರೋ ಫೈನಾನ್ಸ್ ಸಾಲ? ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಸುಗ್ರಿವಾಜ್ಞೆಯಲ್ಲಿ ಏನಿರಲಿದೆ? ಇದು ರಾಜ್ಯದ ಬಹುತೇಕ ಜನರನ್ನು ಕಾಡುತ್ತಿರುವ ಪ್ರಶ್ನೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿ, ಹತ್ತಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೂರಾರು ಕುಟುಂಬಗಳು ಊರು ತೊರೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೈಕ್ರೋ ಫೈನಾನ್ಸ್’ಗಳ ವಿರುದ್ಧ ಸುಗ್ರಿವಾಜ್ಞೆ ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಗ್ರಿವಾಜ್ಞೆಯ ಕರಡು ಮಸೂದೆಯನ್ನು ರಾಜ್ಯ ಪಾಲರ ಅಂಕಿತಕ್ಕಾಗಿ ಕಳುಹಿಸಿದ್ದಾರೆ. ರಾಜ್ಯ ಪಾಲರ ಅಂಕಿತ ದೊರೆತ ಬಳಿಕ ಸುಗ್ರಿವಾಜ್ಞೆ ಜಾರಿಯಾಗಲಿದೆ.
ತುಮಕೂರು ಜಿಲ್ಲೆಯಲ್ಲಿ ರಾಜ್ಯದಲೇ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲ!
ಸಾಲ ಮನ್ನಾ ಆಗುತ್ತಾ?: ಸುಗ್ರಿವಾಜ್ಞೆ ಜಾರಿಗೊಳ್ಳಲು ದಿನಗಣನೆ ಆರಂಭವಾಗಿದ್ದು, ವಿವಿಧ ಮೈಕ್ರೋ ಫೈನಾನ್ಸ್’ಗಳ ಮೂಲಕ ಸಾಲ ಪಡೆದಿರುವ ಸಾಲಗಾರರು ತಮ್ಮ ಸಾಲ ಮನ್ನಾ ಆಗುತ್ತದೆಯೇ ಎಂದು ಕಾಯುತ್ತಿದ್ದಾರೆ!
ನಗರದಿಂದ ಹಳ್ಳಿಯವರೆಗೂ ಸದ್ಯ ಜನಸಾಮಾನ್ಯರ ನಡುವೆ ಇದೇ ಚರ್ಚೆ ನಡೆಯುತ್ತಿದೆ. ಸುಗ್ರಿವಾಜ್ಞೆ ಜಾರಿಯಾದರೆ ತಮ್ಮ ಸಾಲ ಮನ್ನಾ ಆಗುತ್ತದೆ ಎಂದು ಭಾವಿಸಿರುವ ಅನೇಕರು ಫೆಬ್ರವರಿ ತಿಂಗಳಿನ ಸಾಲದ ಕಂತು ಕಟ್ಟುತ್ತಿಲ್ಲ! ಸಾಲ ಮರುಪಾವತಿಯ ಸಂದೇಶ, ಫೋನ್ ಕರೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸುಗ್ರಿವಾಜ್ಞೆಯಲ್ಲಿ ಏನಿರಲಿದೆ ಎಂಬ ಕಾದು ನೋಡುವ ತಂತ್ರಕ್ಕೆ ಜನ ಶರಣಾಗಿದ್ದಾರೆ. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಮೈಕ್ರೋ ಫೈನಾನ್ಸ್’ಗಳ ಸಾಲ ವಸೂಲಾತಿಯಲ್ಲಿ ಗಣನೀಯವಾದ ಕುಸಿತವಾಗಿದೆ ಎನ್ನಲಾಗಿದೆ.
ವಾರದ ಸಂಘಕ್ಕೂ ಶಾಕ್: ಇನ್ನೂ ರಾಜ್ಯದ ಹಲವೆಡೆ ಸೋಮವಾರ ನಡೆದ ವಾರದ ಸಂಘದಲ್ಲಿ ಕೂಡ ಮಹಿಳೆಯರು ಸಾಲದ ಕಂತು ಕಟ್ಟಿಲ್ಲ! ಸುಗ್ರಿವಾಜ್ಞೆ ಮೂಲಕ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಬಹುತೇಕ ಮಹಿಳೆಯರು ಸಾಲದ ಕಂತು ಕಟ್ಟಲು ಇಂದು ನಿರಾಕರಿಸಿದ್ದಾರೆ. ಇದರಿಂದಾಗಿ ವಾರದ ಸಂಘ ನಡೆಸುವವರು ಕಂಗಲಾಗಿದ್ದಾರೆ.
ತುಮಕೂರು: ಮೈಕ್ರೋ ಫೈನಾನ್ಸ್’ಗಳಿಗೆ ಬಿತ್ತು ಮೂಗುದಾರ: ಹೀಗೆಲ್ಲಾ ಸಾಲ ವಸೂಲಿ ಮಾಡುವಂತಿಲ್ಲ
ಸಾಲ ಮನ್ನಾ ಸಾಧ್ಯವೇ?: ಅಂದಹಾಗೆ ಸರ್ಕಾರ ಸುಗ್ರಿವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್’ಗಳ ಸಾಲ ಮನ್ನಾ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಬ್ಯಾಂಕಿಂಗ್ ಕ್ಷೇತ್ರದ ಅನುಭವ ಉಳ್ಳವರು, ‘ಸಾಲ ಮನ್ನಾ ಅಸಾಧ್ಯ’ ಎಂದಿದ್ದಾರೆ.
ನೋಂದಾಯಿತ ಮೈಕ್ರೋ ಫೈನಾನ್ಸ್’ಗಳು ನೀಡಿದ ಸಾಲವನ್ನು ಸರ್ಕಾರ ಮನ್ನಾ ಮಾಡುವುದು ಸಾಧ್ಯವಿಲ್ಲ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
ಒಟ್ಟಾರೆಯಾಗಿ ಜನರು ಸರ್ಕಾರದ ಸುಗ್ರಿವಾಜ್ಞೆ ಜಾರಿಗೆ ಕಾಯುತ್ತಿದ್ದು, ಫೈನಾನ್ಸ್ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದೆ.
+ There are no comments
Add yours