ತುಮಕೂರು: ವೈಚಾರಿಕತೆಗೆ ಹೊಸ ಅರ್ಥ ತಂದುಕೊಟ್ಟ ಶ್ರೇಷ್ಠ ಸಂತ ಕನಕದಾಸ

1 min read

 

.ಕನಕದಾಸರು ತಮ್ಮ ಕೀರ್ತನೆ ಮತ್ತು ವಚನಗಳ ಮೂಲಕ ವೈಚಾರಿಕತೆಗೆ ಹೊಸ ಅರ್ಥ ತಂದು ಕೊಟ್ಟ ಶ್ರೇಷ್ಠ ದಾಸಸಂತರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಕುರುಬರ ಸಂಘ ಸಂಸ್ಥೆಗಳ ವತಿಯಿಂದ ಸೋಮವಾರ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರು ಬಾಲ್ಯದಲ್ಲಿ ಅಪಾರ ದೈವಭಕ್ತಿಯನ್ನು ಹೊಂದಿದ್ದರು. ದೇವರಿಲ್ಲದ ಸ್ಥಳವೇ ಇಲ್ಲಾ ದೇವರು ನಮ್ಮ ಸರಿ-ತಪ್ಪುಗಳನ್ನು ಗಮನಿಸುತ್ತಿರುತ್ತಾನೆ. ಸರಿದಾರಿಯಲ್ಲಿ ನಡೆದಾಗ ಮಾತ್ರ ದೇವರಿಗೆ ನಾವು ಪ್ರಿಯವಾಗುತ್ತೇವೆ ಎಂದು ನಂಬಿದ್ದರು. ಕನಕದಾಸರ ನಂಬಿಕೆಯಂತೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ನಮ್ಮ ಸುತ್ತಮುತ್ತಲಿನ ಜನ ಗಮನಿಸುತ್ತಿರುತ್ತಾರೆ ಎಂಬ ಎಚ್ಚರಿಕೆ ಇರಬೇಕು. ಯಾವುದೇ ಕೆಲಸವಾಗಲಿ ಶ್ರದ್ಧೆ- ಭಕ್ತಿಯಿಂದ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್, ಕನಕದಾಸರು ಕವಿಯಾಗಿ, ಸಂತನಾಗಿ, ಸಮಾಜ ಸುಧಾರಕರಾಗಿ ಸಾರ್ವತ್ರಿಕ ಮೌಲ್ಯಗಳನ್ನು ತಿಳಿಸಿದರು. ಕನಕ ದಾಸರ ಸಾರ್ವಕಾಲಿಕ ಸತ್ಯಗಳನ್ನು ನಾವೆಲ್ಲರೂ ತಿಳಿದು ಬದುಕಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ಮಾತನಾಡಿ, ದಾಸಸಾಹಿತ್ಯ ಮತ್ತು ವಚನಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ಶ್ರೇಷ್ಠ ಸಂತ ಕನಕ ದಾಸರ ಸಾಹಿತ್ಯದ ವಿಚಾರಧಾರೆಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಜನಸಾಮಾನ್ಯರೊಂದಿಗೆ ಬದುಕಿ ಜನರಿಗೆ ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ ಕನಕ ದಾಸರ ಕೀರ್ತನೆಗಳು ಈಗಲೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಬಿರುದು-ಬಾವಲಿಗಳಿಗಾಗಿ ಗೀತೆಗಳನ್ನು ರಚಿಸದೇ ಜನರ ನೋವು-ನಲಿವುಗಳನ್ನೇ ಕೀರ್ತನೆಗಳನ್ನಾಗಿ ರಚಿಸುವ ಮೂಲಕ ಸದಾಕಾಲ ಜನಮಾನಸದಲ್ಲಿ ಉಳಿದುಕೊಂಡರು ಕನಕ ದಾಸರು. ಕನಕ ದಾಸರ ಕೀರ್ತನೆಗಳು ಸಹಿಷ್ಣುತೆಯ ಬದುಕು ಕಟ್ಟಿಕೊಳ್ಳಲು, ಸಹಬಾಳ್ವೆಯ ಜೀವನ ನಡೆಸಲು ಸ್ಫೂರ್ತಿದಯಕವಾಗಿವೆ. ಜಾತಿ, ಮತ, ಧರ್ಮ, ಕುಲಗಳ ಬಗ್ಗೆ ಕನಕ ದಾಸರು ತಮ್ಮ ಕೀರ್ತನೆಗಳ ಮೂಲಕ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು. ಸಮಾಜದಲ್ಲಿ ಬದಲಾವಣೆಗಳನ್ನು ತರಲು ಕನಕ ದಾಸರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಪ್ರಭುದ್ಧರಾಗಬೇಕು ಎಂದು ಲೇಖಕಿ ಡಾ.ಎನ್.ಆರ್.ಲಲಿತಾಂಬ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮರಳೂರು ಟಿ.ಹೆಚ್. ಹನುಮಂತಪ್ಪ, ಲಿಂಗಾಪುರದ ಶಿವಣ್ಣ ಬಿನ್ ಚಿಕ್ಕಣ್ಣ, ಹರಳಕಟ್ಟೆಯ ಚಿಕ್ಕಲಿಂಗಯ್ಯ; ಸಮಾಜಸೇವೆ ಕ್ಷೇತ್ರದಲ್ಲಿ ಮೆಳೇಕೋಟೆಯ ಎಂ.ಪಿ.ರಮೇಶ್, ಕಾಳಮ್ಮನಗುಡಿ ಬೀದಿಯ ಸಿ.ಎಲ್.ರವಿಕುಮಾರ್, ತುಮಕೂರಿನ ಆರ್.ತಿಪ್ಪೇಸ್ವಾಮಿ, ವೈ.ಎನ್.ಹೊಸಕೋಟೆಯ ಪೂಜಾರಿ ಚೌಡಪ್ಪ; ವೈದ್ಯಕೀಯ ಕ್ಷೇತ್ರದಲ್ಲಿ ಉಪ್ಪಾರಹಳ್ಳಿಯ ಡಾ|| ಶಶಿಧರ್; ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಾರಂಜಿಗುಡಿ ಬೀದಿಯ ಟಿ.ಎಸ್.ಎಂ.ಪಿ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ತುಮಕೂರು ತಾಲ್ಲೂಕು ಡಿ.ಎಂ.ಪಾಳ್ಯ ಶ್ರೀ ಗುರುರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀಶ್ರೀ ಬಿಂಧುಶೇಖರ ಒಡೆಯರ್ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ|| ಎಂ.ಆರ್.ಹುಲಿನಾಯ್ಕರ್, ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಭೀಮರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುನಿತಾ ನಟರಾಜು, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು ಸೇರಿದಂತೆ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours