ತುಮಕೂರು: ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ: ಸಿದ್ಧತೆ
Tumkurnews
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸವಲತ್ತುಗಳ ವಿತರಣೆಗೆ ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳಲ್ಲಿ ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸಬೇಕು ಹಾಗೂ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಿರುವ ಕಾಮಗಾರಿ, ಶಂಕುಸ್ಥಾಪನೆ ನೆರವೇರಿಸಲಿರುವ ಕಾಮಗಾರಿ ಹಾಗೂ ಇಲಾಖೆಗಳಿಂದ ವಿತರಿಸಲಾಗುವ ಸವಲತ್ತುಗಳ ವಿವರವನ್ನು ದೃಢೀಕರಿಸಿ ನಿಖರ ಮಾಹಿತಿಯನ್ನು ಸಲ್ಲಿಸಬೇಕು. ಸವಲತ್ತು ವಿತರಣೆ ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
+ There are no comments
Add yours