ತುಮಕೂರು: ವಕ್ಫ್ ಆಸ್ತಿಗೆ ರೈತರ ಜಮೀನು ಕಬಳಿಕೆಗೆ ಸರ್ಕಾರದ ಹುನ್ನಾರ: ಬಿಜೆಪಿ ಪ್ರತಿಭಟನೆ

1 min read

 

ವಕ್ಫ್ ಆಸ್ತಿಗೆ ರೈತರ ಜಮೀನು ಕಬಳಿಕೆಗೆ ಸರ್ಕಾರದ ಹುನ್ನಾರ: ಬಿಜೆಪಿ ಪ್ರತಿಭಟನೆ

Tumkurnews
ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಆಸ್ತಿಗಾಗಿ ರಾಜ್ಯದ ರೈತರ, ಮಠಮಾನ್ಯಗಳ, ಹಿಂದೂಗಳ ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ, ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ, ಮಠಮಾನ್ಯಗಳ, ಬಡವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ. ಸದ್ದು ಮಾಡದೆ ರಾಜ್ಯ ಸರ್ಕಾರ ವಕ್ಫ್ ಜೊತೆ ಸೇರಿಕೊಂಡು ಮುಸ್ಲೀಮರ ತುಷ್ಟೀಕರಣಕ್ಕಾಗಿ ಜನರ ಜಮೀನನ್ನು ಕಬಳಿಸುತ್ತಿದೆ ಎಂದು ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರೀ ಹಗರಣಗಳಲ್ಲೇ ಮುಳುಗಿದೆ. ವಾಲ್ಮೀಕಿ ನಿಗಮ, ಮುಡಾ ಹಗರಣಗಳ ನಂತರ ಈಗ ರೈತರ ಆಸ್ತಿ ಕಬಳಿಸುವ ವಕ್ಫ್ ವಿವಾದ ಆರಂಭಿಸಿದೆ. ಶಾಸಕರಿಗೆ ಅನುದಾನ ಕೊಡಲಾಗದಷ್ಟು ದಿವಾಳಿಯಾಗಿರುವ ಈ ಸರ್ಕಾರದ ಮಂತ್ರಿಗಳು ರಾಜ್ಯ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ದೊಡ್ಡದಾಗಿ ಭಾಷಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ನಾಟಕ ಜನರಿಗೆ ಅರ್ಥ ಆಗಿದೆ. ಪಾಠ ಕಲಿಸಲು ಸಮಯ ಕಾಯುತ್ತಿದ್ದಾರೆ ಎಂದರು.
ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದೆ. ಸಚಿವ ಜಮೀರ್ ಅಹಮದ್ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ಹೀಗೆ ಮಾಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಇದೆಲ್ಲಾ ನಡೆಯಲು ಸಾಧ್ಯವಿಲ್ಲ, ವ್ಯವಸ್ಥಿತವಾಗಿ ರೈತರ ಜಮೀನನ್ನು ವಕ್ಫ್ ಬೋರ್ಡ್‍ಗೆ ಕಬಳಿಸಲು ಸರ್ಕಾರವೇ ಮುಂದೆ ನಿಂತಿದೆ. ಇಂತಹ ಸರ್ಕಾರದಿಂದ ಜನಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವೇ? ರೈತ ಜಮೀನು ಕಬಳಿಸಲು ಬಿಜೆಪಿ ಬಿಡುವುದಿಲ್ಲ, ಸಚಿವ ಜಮೀರ್ ಅಹಮದ್ ನಿನಗೆ ತಾಕತ್ತಿದ್ದರೆ ರೈತರ ಜಮೀನು ಮುಟ್ಟಿ ನೋಡು ಎಂದು ಸುರೇಶ್‍ಗೌಡ ಸವಾಲು ಹಾಕಿದರು.
40 ವರ್ಷ ರಾಜಕೀಯ ಜೀವನದಲ್ಲಿರುವ ಸಿದ್ದರಾಮಯ್ಯನವರೇ ಕಾಂಗ್ರೆಸ್‍ನವರೇ ನಿಮ್ಮನ್ನು ಅಧಿಕಾರದಿಂದ ಇಳಿಸಿ ಮನೆಗೆ ಕಳಿಸುತ್ತಾರೆ. ಕಡೆ ಕಾಲದಲ್ಲಿ ರಾಜ್ಯದ ಜನರಿಗೆ ಅನ್ಯಾಯ ಮಾಡಬೇಡಿ, ನ್ಯಾಯ ಕೊಡಿ, ಹಿಂದೂ-ಮುಸ್ಲೀಮರ ನಡುವೆ ಬೆಂಕಿ ಹಚ್ಚುತ್ತಿರುವ ಜಮೀರ್‍ ನನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ ಎಂದು ಒತ್ತಾಯಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ರಾಜ್ಯದಲ್ಲಿ ಕೆಟ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲೀಮರ ಓಲೈಕೆ ಮೂಲಕ ನಿತ್ಯ ಒಂದಲ್ಲೊಂದು ವಿವಾದ ಸೃಷ್ಟಿಸುತ್ತಾ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈಗ ವಕ್ಫ್ ಬೋರ್ಡ್‍ಗೆ ಹಿಂದೂಗಳ ಜಮೀನು ಕಬಳಿಸುವ ಕುತಂತ್ರ ನಡೆಸಿದೆ. ದೇಶದ ಭದ್ರತೆ ಬದಿಗಿಟ್ಟು ಮುಸ್ಲೀಮರ ತುಷ್ಟೀಕರಣ ಮಾಡುತ್ತಾ ವೋಟಿಗಾಗಿ ದೇಶವನ್ನೇ ಅಡವಿಡಲು ಹೊರಟಿದೆ ಎಂದು ಟೀಕಿಸಿದರು.
ರೈತರ ಜಮೀನು ವಕ್ಫ್’ಗೆ ಕಬಳಿಸಲು ಆದೇಶ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಾಕ್ಷಿಯಾಗಿದೆ. ರೈತರ ಒಂದಿಚೂ ಜಮೀನು ವಕ್ಫ್ ಬೋರ್ಡ್‍ಗೆ ಹೋಗಲು ಬಿಜೆಪಿ ಬಿಡುವುದಿಲ್ಲ, ರೈತರ ಜೊತೆ ನಾವಿರುತ್ತೇವೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಮಾತನಾಡಿ, ಅನುಭವಿ ನಾಯಕ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಾರೆ ಎಂದು ಜನ ನಂಬಿದ್ದರು, ಜನರ ನಂಬಿಕೆಗೆ ದ್ರೋಹ ಮಾಡಿ ರೈತರ ಜಮೀನು ಕಬಳಿಸುವಂತಹ ಪ್ರಯತ್ನಕ್ಕೆ ಸರ್ಕಾರ ಇಳಿದಿರುವುದು ದುರಾದೃಷ್ಟಕರ. ಈ ಸರ್ಕಾರದ ಆಡಳಿತದಿಂದ ರಾಜ್ಯ ಅರಾಜಕತೆಯತ್ತ ಹೋಗುತ್ತಿದೆ. ವಕ್ಫ್ ಬೋರ್ಡ್’ಗೆ ರೈತರ ಜಮೀನು ಪಡೆಯಲು ಒಮ್ಮೆ ಆದೇಶ ಮಾಡುವುದು, ಇನ್ನೊಮ್ಮೆ ಆ ಆದೇಶ ಹಿಂಪಡೆಯುವುದು, ಇದು ತುಘಲಕ್ ದರ್ಬಾರ್ ಆಗಿದೆ. ಕಾಂಗ್ರೆಸ್‍ಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡರಾದ ಎಸ್.ಶಿವಪ್ರಸಾದ್, ವೈ.ಹೆಚ್.ಹುಚ್ಚಯ್ಯ ಮಾತನಾಡಿ, ರಾಜ್ಯ ಸರ್ಕಾರ ವೋಟಿಗಾಗಿ ಮುಸ್ಲೀಮರ ಓಲೈಕೆ ಮಾಡುತ್ತಾ ಹಿಂದುಗಳನ್ನು ನಿರ್ನಾಮ ಮಾಡಲು ಹೊರಟಿದೆ. ವಕ್ಫ್ ಆಸ್ತಿ ವಿವಾದ ಆರಂಭಿಸಿ ಎರಡು ಧರ್ಮದವರ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ನಿರತರಾಗಿದ್ದಾರೆ. ಜಮೀರ್ ಅಹಮದ್‍ನನ್ನು ರಾಜಕಾರಣದಿಂದ ಒದ್ದೋಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ಆತಂಕಕ್ಕೆ ತಳ್ಳಿದೆ. ದೇಶದ ಜನರ ಹಿತದೃಷ್ಟಿಯಿಂದ, ವಕ್ಫ್ ಮಂಡಳಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ಮೂಲಕ ದೇಶದಲ್ಲಿ ಸಾರ್ವಜನಿಕ ಆಸ್ತಿ ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಬಿಜೆಪಿ ವಕ್ತಾರ ಹೆಚ್.ಟಿ.ಚಂದ್ರಶೇಖರ್, ಮುಖಂಡರಾದ ದಿಲೀಪ್‍ಕುಮಾರ್, ಹೆಚ್.ಟಿ.ಭೈರಪ್ಪ, ಡಾ.ಪರಮೇಶ್, ಟಿ.ಹೆಚ್.ಹನುಮಂತರಾಜು, ಗಂಗರಾಜು, ಭೈರಣ್ಣ, ಸಂದೀಪ್‍ಗೌಡ, ಟಿ.ಆರ್.ಸದಾಶಿವಯ್ಯ, ಬಿ.ಜಿ.ಕೃಷ್ಣಪ್ಪ, ಸತ್ಯಮಂಗಲ ಜಗದೀಶ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದರಾಮಣ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಆಂಜನಪ್ಪ, ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ನವಚೇತನ್ ಸೇರಿದಂತೆ ನಗರಪಾಲಿಕೆ ಮಾಜಿ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours