ತುಮಕೂರು ದಸರಾ: ಅ.12ರಂದು ಜಂಬೂಸವಾರಿ ಮೆರವಣಿಗೆ

1 min read

 

ತುಮಕೂರು ದಸರಾ: ಅ.12ರಂದು ಜಂಬೂಸವಾರಿ ಮೆರವಣಿಗೆ

Tumkurnews
ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅಕ್ಟೋಬರ್ 11ಮತ್ತು 12ರಂದು ತುಮಕೂರು ದಸರಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ಜನತೆ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ತುಮಕೂರು ದಸರಾ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ ನೀಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ದೇವಿ ನಿತ್ಯಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ತುಮಕೂರಿನಲ್ಲಿಯೂ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಜಿಲ್ಲೆಯ ಕಲಾಸಕ್ತರು, ಸಾಹಿತಿಗಳು, ಕ್ರೀಡಾಪಟುಗಳು, ಲೇಖಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕ್ಷಿಯಾಗಬೇಕೆಂದರು.
ದಸರಾ ಉತ್ಸವದ 9ನೇ ದಿನವಾದ ಅಕ್ಟೋಬರ್ 11ರಂದು ಜಿಲ್ಲೆಯ ಜನರ ಮನಸ್ಸನ್ನು ರಂಜಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದು, ಖ್ಯಾತ ಗಾಯಕ ಗುರು ಕಿರಣ್ ಮತ್ತು ಕಂಬದ ರಂಗಯ್ಯ ಅವರ ತಂಡಗಳಿಂದ ಸಂಗೀತ ರಸಸಂಜೆ, ಮಿನಿ ಮ್ಯಾರಥಾನ್, ಕುಸ್ತಿ, ಆಕರ್ಷಕ ಲೇಸರ್ ಶೋ ಕಾರ್ಯಕ್ರಮವಲ್ಲದೆ, ಅ.12ರಂದು ಮಧ್ಯಾಹ್ನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಆನೆ ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾ ತಂಡಗಳು, ವಿಂಟೇಜ್ ಕಾರ್‍ಗಳು, ಪೊಲೀಸ್ ಹಾಗೂ ಎನ್.ಸಿ.ಸಿ ಬ್ಯಾಂಡ್, ಹಳ್ಳಿಕಾರ್ ಎತ್ತುಗಳು ಸೇರಿದಂತೆ ಅಲಂಕೃತಗೊಂಡ ಟ್ರ್ಯಾಕ್ಟರ್‍’ನಲ್ಲಿ ಜಿಲ್ಲೆಯ 70 ದೇವರುಗಳು ಇರಲಿವೆ ಎಂದು ತಿಳಿಸಿದರು.
ಶಿಕ್ಷಣ ಭೀಷ್ಮ ಎಚ್.ಎಂ. ಗಂಗಾಧರಯ್ಯ ಮಹಾದ್ವಾರ ಉದ್ಘಾಟನೆ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಉತ್ಸವ ಆಚರಣೆಗಾಗಿ ವಿವಿಧ ವೇದಿಕೆಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಅಕ್ಟೋಬರ್ 9ರಂದು ಮೈದಾನದನಲ್ಲಿ ನಿರ್ಮಿಸಿರುವ ಶಿಕ್ಷಣ ಭೀಷ್ಮ ಎಚ್.ಎಂ. ಗಂಗಾಧರಯ್ಯ ಮಹಾದ್ವಾರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಾಸ್ಯ ಚಕ್ರವರ್ತಿ ನರಸಿಂಹರಾಜು ವೇದಿಕೆಯಲ್ಲಿ ಅಕ್ಟೋಬರ್ 10ರವರೆಗೆ ನಡೆಯಲಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಜಿಲ್ಲೆಯ ಯುವ ಪ್ರತಿಭೆಗಳು ಮತ್ತು ವಿವಿಧ ಕಲಾ ತಂಡಗಳಿಂದ ವೈವಿಧ್ಯಮಯ ಕಲಾ ಪ್ರದರ್ಶನಗಳು ಜರುಗುತ್ತಿವೆ. ಅಲ್ಲದೆ ಅ.11ರಂದು ಚಾಲನೆ ನೀಡಲಿರುವ ವಿಂಟೇಜ್ ಕಾರುಗಳ ಪ್ರದರ್ಶನ, ಹೆಲಿಕ್ಯಾಪ್ಟರ್ ಪ್ರದರ್ಶನ, ರಾಜ ರಾಮಣ್ಣ ವಸ್ತು ಪ್ರದರ್ಶನ, ತೋಟಗಾರಿಕೆ ಇಲಾಖೆ ವಸ್ತು ಪ್ರದರ್ಶನವನ್ನು ಏರ್ಪಡಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.

About The Author

You May Also Like

More From Author

+ There are no comments

Add yours