ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ | ನಿಯಮ ಉಲ್ಲಂಘನೆಗೆ ಮೌನದ ಇಂಬು
ಮಿತಿ ಮೀರಿದ ಸರ್ಕಾರಿ ವಾಹನಗಳ ದುರ್ಬಳಕೆ
ವಿಶೇಷ ವರದಿ- ಹರೀಶ್ ಕಮ್ಮನಕೋಟೆ
ತುಮಕೂರು: ಜಿಲ್ಲೆಯಲ್ಲಿ ಸರ್ಕಾರಿ ವಾಹನಗಳ ದುರ್ಬಳಕೆ ಎಲ್ಲೆ ಮೀರಿದ್ದು, ಅಧಿಕಾರಿಗಳ ಈ ನಡೆಗೆ ಕಡಿವಾಣ ಇಲ್ಲದಂತಾಗಿದೆ. ಮದುವೆ, ಬಾಡೂಟ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ‘ಕರ್ನಾಟಕ ಸರ್ಕಾರ’ ಎಂಬ ಬರಹವಿರುವ ಕಾರುಗಳು ಕಂಡುಬರುತ್ತಿವೆ. ಈ ಮೂಲಕ ರಾಜ್ಯ ಸರ್ಕಾರಿ ಬೊಕ್ಕಸದ ಹೊರೆಗೆ ತುಮಕೂರಿನ ವಿವಿಧ ಇಲಾಖಾ ಅಧಿಕಾರಿಗಳ ಪಾಲಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.
ರಾಜ್ಯಾದ್ಯಂತ ಸರ್ಕಾರಿ ವಾಹನಗಳ ದುರ್ಬಳಕೆಯಿಂದಾಗಿ ೨೦೧೮ರಲ್ಲಿ ಬೊಕ್ಕಸಕ್ಕೆ ಸುಮಾರು ೩ ಸಾವಿರ ಕೋಟಿ ರೂ. ಹಣ ನಷ್ಟವಾಗಿದೆ ಎಂದು ವರದಿಯೊಂದು ಹೇಳಿದೆ. ಸರ್ಕಾರಿ ವಾಹನಗಳು ಸರ್ಕಾರದ ಕೆಲಸಕ್ಕೆ ಮಾತ್ರ ಬಳಕೆಯಾಗದೆ ಖಾಸಗಿ ಕೆಲಸಗಳಿಗೆ ಬಳಕೆಯಾಗುತ್ತಿರುವುದೇ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ೧.೨೦ ಲಕ್ಷ ಸರ್ಕಾರಿ ವಾಹನಗಳಿದ್ದು, ಇವುಗಳಿಗೆ ಇಂಧನವಷ್ಟೇ ಅಲ್ಲದೆ, ಆಯಿಲ್, ಟೈಯರ್, ಸರ್ವಿಸ್ ಹಾಗೂ ನಿರ್ವಹಣೆಗೆಂದೇ ಕೋಟ್ಯಾಂತರ ರೂ. ನೀರಿನಂತೆ ವ್ಯಯವಾಗುತ್ತಿದೆ.
ಅಧಿಕಾರಿಗಳು ಖಾಸಗಿ ಪ್ರಯಾಣವಲ್ಲದೆ ಮನೆ ಮಂದಿಯನ್ನೆಲ್ಲಾ ಕರೆದುಕೊಂಡು ಹೋಗುತ್ತಾರೆ. ಸರ್ಕಾರಿ ವಾಹನಗಳನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನವನ್ನು ಕಚೇರಿಯಲ್ಲೇ ನಿಲ್ಲಿಸಿ ಹೋಗಬೇಕೆಂದು ಇದೆ. ಬಳಕೆ ಮಾಡಿದ ನಂತರ ಲಾಗ್ ಬುಕ್‌ನಲ್ಲಿ ಬಳಕೆ ಮಾಡುವುದಿಲ್ಲ. ಎಲ್ಲದಕ್ಕೂ ಅಫಿಶಿಯಲ್ ಬಳಕೆ ಎಂದೇ ಉಲ್ಲೇಖ ಮಾಡುತ್ತಾರೆ. ಅಧಿಕಾರಿಗಳಿಗೆ ಪಿಕಪ್ ಆ್ಯಂಡ್ ಡ್ರಾಪ್ ಕೂಡ ಇಲ್ಲ. ಮೇಲಿನಿಂದ ಅಧೀನ ಅಧಿಕಾರಿಗಳ ವರೆಗೆ ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೋವಾ ಕಾರಿಗೆ ೫೦೦ ಕಿ.ಮೀ ಗೆ ಎರಡು ರೂಪಾಯಿ ಕಟ್ಟುವ ನಿಯಮವಿದೆ. ಯಾವ ಆಧಾರದ ಮೇಲೆ ಇಷ್ಟು ಹಣ ನಿಗದಿ ಮಾಡಲಾಗಿದೆ ಎಂಬುದೇ ಪ್ರಶ್ನೆ ಎಂದು ಲಂಚ ಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ವಿಜಯ ರಾಘವ ಮರಾಟೆ ಮಾಹಿತಿ ನೀಡಿದರು.
ಕಾರ್ ಸರ್ವೀಸ್‌ಗೆ ಬಂದರೆ ವ್ಹೀಲ್ ಅಲ್ಹೈನ್‌ಮೆಂಟ್, ಇಂಜಿನ್ ಆಯಿಲ್, ಏರ್‌ಫಿಲ್ಟರ್, ಕೂಲೆಂಟ್ ಆಯಿಲ್ ಬದಲಾಯಿಸಿ ಕೊಡುತ್ತೇವೆ. ಒಂದು ಸಲ ಸರ್ವೀಸ್‌ಗೆಂದು ಗ್ಯಾರೆಜ್‌ಗೆ ಇನ್ನೋವಾದಂತಹ ಕಾರನ್ನು ಬಿಟ್ಟರೆ ಗರಿಷ್ಠ ೬ ಸಾವಿರ ರೂ. ಖರ್ಚು ಬರುತ್ತದೆ. ಇನ್ನಿತರೆ ಕಾರುಗಳಿಗೆ ಕಡಿಮೆಯಿಲ್ಲದಂತೆ ೪ ಸಾವಿರ ಖರ್ಚು ಬರಲಿದೆ ಎಂದು ಮೆಕ್ಯಾನಿಕ್ ಒಬ್ಬರು ತಿಳಿಸಿದರು.
ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಫುಲ್ ಟೈಮ್ ಡ್ಯೂಟಿಯಲ್ಲಿರುತ್ತಾರೆ. ಕ್ರೈಮ್ ಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಆದ್ದರಿಂದ ಸರ್ಕಾರಿ ವಾಹನವನ್ನು ಮನೆಗೆ ತೆಗೆದುಕೊಂಡು ಹೋಗಿರಬಹುದು ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಇತರೆ ಅಭಿವೃದ್ಧಿ ಕಾರ್ಯಗಳಿಗೆ ವಿತ್ತೀಯ ಕೊರತೆ ಎದುರಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಅಧಿಕಾರಿಗಳು ಮನಸೋ ಇಚ್ಛೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಂತಿಲ್ಲ. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎಂಬಂತೆ ಹಿರಿಯ ಅಧಿಕಾರಿಗಳೇ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡರೆ ಅಧೀನ ಅಧಿಕಾರಿಗಳನ್ನು ಕೇಳಬೇಕೇ? ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕ್ರಮಕೈಗೊಳ್ಳುವ ಅಥವಾ ದುರ್ಬಳಕೆ ಮಾಡಿಕೊಳ್ಳದಂತೆ ಸುತ್ತೋಲೆ ಹೊರಡಿಸುವ, ಇಲಾಖೆಗಳಿಂದ ವರದಿ ಕೇಳುವ ಕೆಲಸವನ್ನಾದರೂ ಮಾಡಬೇಕು. ಇಲ್ಲವಾದರೆ ‘ಮೌನಂ ಸಮ್ಮತಿ ಲಕ್ಷಣಂ’ ಎಂದಾಗುತ್ತದೆ.
೨೦೨೨ರಲ್ಲಿ ತುಮಕೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಮನೆಯ ಸಾಮಗ್ರಿಗಳನ್ನು ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದರು. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಸಂಘಟನೆ ಮುಖಂಡರು ದೂರು ದಾಖಲಿಸಿದ್ದು ಸುದ್ದಿಯಾಗಿತ್ತು. ೨೦೨೦ರಲ್ಲಿ ಕುಣಿಗಲ್‌ನಲ್ಲಿ ಸಮವಸ್ತ್ರದಲ್ಲೇ ಪೊಲೀಸ್ ವಾಹನದಲ್ಲಿ ಕುಳಿತು ಮದ್ಯ ಸೇವಿಸಿದ್ದ ಆರೋಪದಡಿಯಲ್ಲಿ ಮೂವರು ಪೊಲೀಸರನ್ನು ಅಂದಿನ ಎಸ್ಪಿಯಾಗಿದ್ದ ವಂಶಿಕೃಷ್ಣ ಅವರು ಅಮಾನತ್ತು ಗೊಳಿಸಿ ಆದೇಶ ನೀಡಿದ್ದರು. ಇತ್ತೀಚೆಗೆ ಅಂದರೆ ಜುಲೈ (೨೦೨೪) ತಿಂಗಳಲ್ಲಿ ತುರುವೇಕೆರೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಸರ್ಕಾರಿ ವಾಹನವನ್ನು ವೈಯಕ್ತಿಕ ಚಟುವಟಿಕೆಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ವೇಳೆ ಕೆಆರ್‌ಎಸ್ ಪಾರ್ಟಿ ಕಾರ್ಯಕರ್ತರು ತರಾಟೆ ತೆಗೆದು ಕೊಂಡಿದ್ದರು. ನಂತರ ಇಒ ಅವರು ತಪ್ಪೊಪ್ಪಿಕೊಂಡು ಖಾಸಗಿ ವಾಹನದಲ್ಲಿ ತೆರಳಿದ್ದರು. ಹೀಗೆ ಜಿಲ್ಲೆಯಲ್ಲಿ ನಿರಂತರವಾಗಿ ಸರ್ಕಾರಿ ವಾಹನಗಳ ದುರ್ಬಳಕೆ ನಡೆಯುತ್ತಲೇ ಸಾಗಿದೆ.
ಸರ್ಕಾರದಿಂದ ತಮಗೆ ನೀಡಿರುವ ವಾಹನಗಳನ್ನು ಶಾಲೆಗೆ ಮಕ್ಕಳನ್ನು ಬಿಡಲು, ತೋಟದ ಕೆಲಸಗಳಿಗೆ, ನೆಂಟರ ಮನೆಗಳಿಗೆ ಓಟಾಟ ಮಾಡಲು ಬಳಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬಡವರು, ಕೂಲಿ ಕಾರ್ಮಿಕರು, ಕೃಷಿಕರು, ಶ್ರಮಿಕರೆಲ್ಲರ ತೆರಿಗೆ ಹಣವನ್ನು ಪೋಲು ಮಾಡಿ ಶೋಕಿ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳು ‘ದಿಮ್ಮಾಲೆರಂಗ’ ಎಂಬಂತೆ ವರ್ತಿಸುತ್ತಿದ್ದಾರೆ. ಜನರು ಕಾಸಿಗೆ ಕಾಸು ಕೂಡಿಟ್ಟು ಜೀವನ ನಡೆಸುವುದೇ ದುಸ್ತರ ವಾಗಿರುವಾಗ ಬಡವರ ಬೆವರಿನ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದ್ದು, ಆಕ್ರೋಶವೂ ವ್ಯಕ್ತವಾಗಿದೆ.
ಆಡಳಿತ ಪಾರದರ್ಶಕ ವಾಗಿರುವಂತೆ ನೋಡಿಕೊಳ್ಳದೆ, ಅಧೀನ ಅಧಿಕಾರಿಗಳ ಮೇಲೆ ಆರೋಪ ಬಂದಾಗ ಶಿಸ್ತು ಕ್ರಮ ಕೈಗೊಳ್ಳುವ ಕೆಲಸಗಳು ನಡೆಯುತ್ತಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವ ಕೆಲಸ ಇಲಾಖೆಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚೆಗೆ ಮಿತಿ ಮೀರಿದ ಭ್ರಷ್ಟಾಚಾರ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗದಂತಹ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಹಿರಿಯ ಅಧಿಕಾರಿಗಳೇನೂ ಹೊರತಾಗಿಲ್ಲ. ಅಧಿಕಾರಿಗಳು ಕಾನೂನಿನ ಮೇಲೆ ಗೌರವ ಹೆಚ್ಚಿಸಿಕೊಳ್ಳದಿದ್ದರೆ ಸರ್ಕಾರಿ ಕೆಲಸಕ್ಕೆ ಲಾಯಕ್ಕಲ್ಲ ಎಂಬುದು ಸ್ಪಷ್ಟವಾಗುತ್ತದೆ.
****
ಚಿತ್ರ: ಪೊಲೀಸ್ ಇಲಾಖೆಯ ವಾಹನ ‘ಕೆಎ ೦೩ ಜಿ ೧೩೮೨, ಮಹೀಂದ್ರ ಬುಲೆರೋ, ಪೊಲೀಸ್ ಡಿಸಿಆರ್ ಪಿಐ’ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮನೆ ಮುಂದೆ ನಿಂತಿರುವುದು.
*******
ಈ ವಾಹನ ಒಮ್ಮೊಮ್ಮೆ ಕರ್ತವ್ಯದ ವೇಳೆಯಲ್ಲಿಯೂ ಅಲ್ಲದೆ ಭಾನುವಾರದಂದು ಮನೆಗೆ ಬಂದು ಹೋಗುತ್ತಿರುವುದು ಕಂಡು ಬಂದಿದೆ. ಇದು ನಿರಂತರವಾಗಿ ನಡೆಯುತ್ತಿದ್ದು, ಇದು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವಾಗಿದೆ. ಇಷ್ಟೊಂದು ರಾಜಾರೋಷವಾಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ, ಈ ಅಧಿಕಾರಿ ತನ್ನ ಸ್ವಂತ ಊರಿರುವ ಜಿಲ್ಲೆಗೆ ಪೋಸ್ಟಿಂಗ್ ಹಾಕಿಸಿಕೊಂಡಿರುವುದೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯದರ್ಶಿಗೆ ದೂರು ಸಲ್ಲಿಕೆಯಾಗಿದ್ದು, ಅಗತ್ಯ ಕ್ರಮಕ್ಕಾಗಿ ದೂರುದಾರರ ಅರ್ಜಿಯನ್ನು ವರ್ಗಾಯಿಸಲಾಗಿದೆ ಎಂದು ಕೂಡ ಇ-ಮೇಲ್ ಮುಖಾಂತರ ಪ್ರತಿಕ್ರಿಯೆ ಬಂದಿದೆ.
*******
ಎಲ್ಲಾ ಸರ್ಕಾರಿ ವಾಹನಗಳನ್ನು ನಿಯಂತ್ರಣ ಮಾಡುವುದಕ್ಕೆ ಮಂಡಳಿ ರಚನೆಯಾಗಬೇಕು. ಲಕ್ಷಾಂತರ ಬಾಬತ್ತು ಖರ್ಚಾಗುವ ಕಡೆ ಲಕ್ಷ್ಯ ವಹಿಸಿ ಅದಕ್ಕೆಂದೇ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ನಿರ್ದಿಷ್ಟವಾದ ಮಾನದಂಡಗಳನ್ನು ರೂಪಿಸಿ ಲೆಡ್ಜರ್ ಬುಕ್ ನಿರ್ವಹಿಸಬೇಕು. ಮನೆಯಿಂದ ಕಚೇರಿಗೆ ಸರ್ಕಾರಿ ವಾಹನ ಬಳಸಲು ಅನುಮತಿ ಇರುವುದಿಲ್ಲ. ಕಚೇರಿ ಉದ್ದೇಶಕ್ಕೆ ಮಾತ್ರ ಬಳಸಲು ಅವಕಾಶವಿದೆ. ವೈಯಕ್ತಿಕ ಕೆಲಸಗಳಿಗೆ ವಾಹನ ಬಳಸಿಕೊಳ್ಳುವ ಅಧಿಕಾರಿಗಳ ಜೇಬಿನಿಂದಲೇ ಬೊಕ್ಕಸಕ್ಕೆ ಆದ ನಷ್ಟವನ್ನು ತುಂಬಿಸುವ ಕೆಲಸವಾಗಬೇಕಿದೆ.
– ರಘುಜಾಣಗೆರೆ, ರಾಜ್ಯ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ.
+ There are no comments
Add yours