ಶಿರಾಗೇಟ್ ರಸ್ತೆ ಸಂಚಾರಕ್ಕೆ ಮುಕ್ತ: ಸೇತುವೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?

1 min read

 

ಶಿರಾ ಗೇಟ್ ರಸ್ತೆ: ಸಂಚಾರಕ್ಕೆ ಮುಕ್ತ – ಸಚಿವ ಪರಮೇಶ್ವರ್

Tumkurnews
ತುಮಕೂರು: ಕಳೆದೈದು ತಿಂಗಳಿಂದ ಬಂದ್ ಮಾಡಲಾಗಿದ್ದ ನಗರದ ಶಿರಾ ಗೇಟ್ ರಸ್ತೆಯನ್ನು ಇಂದಿನಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.
ನಗರದ ಎಸ್.ಮಾಲ್ ಬಳಿ ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 6.65 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪುನರ್ ನಿರ್ಮಿಸಿರುವ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರ ಸೇತುವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವುಗಳು ಸಂಭವಿಸುತ್ತಲೇ ಇದ್ದವು. ಕಿರಿದಾಗಿದ್ದ ಈ ಸೇತುವೆಯನ್ನು ಅಗಲೀಕರಣಗೊಳಿಸಿ, ಹೊಸ ಸೇತುವೆಯನ್ನು ನಿರ್ಮಿಸಬೇಕೆಂದು ಈ ಭಾಗದ ಜನರು, ಜನಪ್ರತಿನಿಧಿಗಳಿಂದ ಬಹು ದಿನಗಳ ಬೇಡಿಕೆಯಿತ್ತು. ರಾಜ್ಯದ 15 ಜಿಲ್ಲೆ ಸೇರಿ ಜಿಲ್ಲೆಯ ಪಾವಗಡ, ಕೊರಟಗೆರೆ, ಶಿರಾ, ಮಧುಗಿರಿ ಭಾಗಕ್ಕೆ ಇದೇ ರಸ್ತೆಯಿಂದ ತೆರಳಬೇಕಿತ್ತು. ರಸ್ತೆ ಕಾಮಗಾರಿ ಕೈಗೊಂಡ ನಂತರ ವಾಹನಗಳು ಬಳಸಿಕೊಂಡು ಹನುಮಂತಪುರ ಮೂಲಕ ಸಾಗಬೇಕಿತ್ತು. ಈಗ ಸೇತುವೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಹೇಳಿದರು.

ಕೆ.ಎನ್ ರಾಜಣ್ಣ ಹೇಳಿಕೆ: ಕಾಂಗ್ರೆಸ್, ಸರ್ಕಾರವನ್ನು ಲೇವಡಿ ಮಾಡಿದ ಶಾಸಕ ಸುರೇಶ್ ಗೌಡ
ಸೇತುವೆ ಪುನರ್ ನಿರ್ಮಾಣದಿಂದ ಸಂಚಾರ ಸುಗಮ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವಸಂತನರಸಾಪುರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಎಸ್ ಮಾಲ್ ಬಳಿಯಿರುವ ಈ ಸೇತುವೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಸೇತುವೆ ಪುನರ್ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುವಾಲಿದೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಸೇತುವೆ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ನಾರಾಯಣಪ್ಪ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜಿ.ಬಿ. ಜ್ಯೋತಿಗಣೇಶ್, ಸೇತುವೆ ಪುನರ್ ನಿರ್ಮಾಣ ಕೈಗೊಂಡ ನಂತರ ಸ್ಥಳೀಯರಿಂದ ಪ್ರತಿದಿನ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಡಗಳು ಬರುತ್ತಲೇ ಇದ್ದವು. ಇಂದಿನಿಂದ ಸೇತುವೆಯು ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ನಗರದ ಕುಡಿಯವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನದ ಅಗತ್ಯವಿದ್ದು, ಅಗತ್ಯ ಅನುದಾನ ಒದಗಿಸುವಲ್ಲಿ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಹುಲಿ ನಾಯ್ಕರ್, ಮಾಜಿ ಸಚಿವ ರೇವಣ್ಣ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಮಂಜಪ್ಪ, ಅಧೀಕ್ಷಕ ಇಂಜಿನಿಯರ್ ಜಿ.ಸಿ. ಜಗಧೀಶ್, ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್, ಅಪರ ಜಿಲ್ಲಾಧಿಕಾರಿ ಡಾ: ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours