ತುಮಕೂರು: ಕರ್ನಾಟಕ ಲೋಕಾಯುಕ್ತ ಭೇಟಿ: ಅಧಿಕಾರಿಗಳ ಸಭೆ

1 min read

 

ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸದ ಅಧಿಕಾರಿ, ಸಿಬ್ಬಂದಿಗೆ ಕಾನೂನು ಕ್ರಮ: ಲೋಕಾಯುಕ್ತ

Tumkurnews
ತುಮಕೂರು: ಸಮಾಜದಲ್ಲಿ ಸಾರ್ವಜನಿಕರಿಗೆ ಸಂವಿಧಾನಾತ್ಮಕವಾಗಿ ಬದುಕಲು ಅವಕಾಶ ಕಲ್ಪಿಸುವ ಹಾಗೂ ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲರಾದ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮೇಲೆ ಕಾನೂನು ಕ್ರಮದ ಬಿಸಿ ಮುಟ್ಟಿಸಲು ಕರ್ನಾಟಕ ಲೋಕಾಯುಕ್ತ ಟೊಂಕ ಕಟ್ಟಿ ನಿಂತಿದೆ ಎಂದು ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಲೋಕಾಯುಕ್ತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಸರ್ಕಾರಿ ಕಚೇರಿ, ಆಸ್ಪತ್ರೆ, ವಿದ್ಯಾರ್ಥಿನಿಲಯ, ಗ್ರಾಮ ಪಂಚಾಯತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿ, ಸಿಬ್ಬಂದಿ ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಸೂಚನೆ ನೀಡಿದರು.
ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿವರ್ಗ, ಸ್ಥಳೀಯ ಸಂಸ್ಥೆಗಳು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆಗಳನ್ನು ಒದಗಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುವ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆಯಾಗುವ ಕೋಟ್ಯಾಂತರ ರೂ.ಗಳ ಅನುದಾನವನ್ನು ಉದ್ದೇಶಿತ ಕಾಮಗಾರಿಗಳಿಗೆ ವಿನಿಯೋಗಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತವಾಗಿ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ರೈತರ ಕೃಷಿ ಚಟುವಟಿಕೆ ಹಾಗು ಕುಡಿಯುವ ನೀರಿನ ಪ್ರಯೋಜನಕ್ಕಾಗಿ ಹಿಂದಿನವರು ನಿರ್ಮಾಣ ಮಾಡಿರುವ ಕೆರೆ-ಕಟ್ಟೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಉಳಿಸುವಂತಹ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ, ಶೌಚಾಲಯ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ನಡೆಯಬಾರದು. ಸರ್ಕಾರದ ಅನುದಾನ ದುರ್ಬಳಕೆ ಮಾಡುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಸಾರ್ವಜನಿಕ ದೂರುಗಳು ಬರುತ್ತಲೇ ಇರುತ್ತವೆ. ದೂರಿನನ್ವಯ ಯಾವುದೇ ಅಧಿಕಾರಿ ಇರಲಿ ತನಿಖೆ ನಡೆಸಿ, ಅಕ್ರಮ ಸಾಬೀತಾದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಲೋಕಾಯುಕ್ತ ಶತಸಿದ್ಧವೆಂದು ನಿರ್ದೇಶನ ನೀಡಿದರು.
ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದಲ್ಲಿ ಪೊಲೀಸ್, ಕಾನೂನು, ತಾಂತ್ರಿಕ, ಆಡಳಿತ ಶಾಖೆ ಸೇರಿ ಪ್ರತ್ಯೇಕ ಶಾಖೆಗಳಿದ್ದು, ಸಂಬಂಧಿಸಿದ ಶಾಖೆಗಳ ಅಧಿಕಾರಿಗಳು ಸ್ವೀಕೃತ ದೂರುಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತಕ್ಕೆ ವಿವರಣಾತ್ಮಕ ವರದಿ ನೀಡಲಿದ್ದಾರೆ. ವರದಿಯನ್ನಾಧರಿಸಿ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಲೋಪಗಳನ್ನು ಸರಿಪಡಿಸಲು ಸೂಕ್ತ ನಿರ್ದೇಶನ, ಸಲಹೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಲೋಕಾಯುಕ್ತದ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಗೆ ಇದು ಮೊದಲ ಭೇಟಿಯಾಗಿದ್ದು, ನಗರದಲ್ಲಿಂದು ಸಂಚರಿಸಿ ತ್ಯಾಜ್ಯ ವಿಲೇವಾರಿ, ಆಸ್ಪತ್ರೆ ಹಾಗೂ ವಸತಿ ನಿಲಯಗಳ ಸ್ವಚ್ಛತೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಬಹು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದಿದ್ದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ತ್ಯಾಜ್ಯ ಮುಕ್ತ ನಗರವನ್ನಾಗಿ ನಿರ್ಮಾಣ ಮಾಡಬೇಕು. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಸ್ಥಳೀಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ. ತ್ಯಾಜ್ಯ ನಿರ್ವಹಣೆಯನ್ನು ಪರಿಶೀಲಿಸಲು ರಾಜ್ಯದಲ್ಲಿ 8 ವಲಯಗಳನ್ನು ಗುರುತಿಸಿ ಜಾಗೃತ ದಳ ಅಧಿಕಾರಿಯನ್ನು ನೇಮಿಸಲಾಗಿದೆ. ದೂರು ಬಂದ ಪ್ರದೇಶಕ್ಕೆ ಜಾಗೃತ ದಳ ಭೇಟಿ ನೀಡಿ ಕಸ ವಿಲೇವಾರಿ ಮಾಡುವ, ಕಸವನ್ನು ತೆರವುಗೊಳಿಸಿ ಪುನಃ ಕಸ ಸಂಗ್ರಹವಾಗದಂತೆ ವ್ಯವಸ್ಥೆ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ದಾರಿ ನೀಡುವ ಕೆಲಸ ಲೋಕಾಯುಕ್ತದಿಂದ ಮಾಡಲಾಗುತ್ತಿದೆ. ಈ ಕ್ರಮದಿಂದ ರಾಜ್ಯದ ಚಿತ್ರದುರ್ಗ, ಬಿಜಾಪುರ, ಶಿವಮೊಗ್ಗ ನಗರಗಳಲ್ಲಿ ಸಂಗ್ರಹವಾಗಿದ್ದ ೧೦೦ ಟನ್‌ಗೂ ಹೆಚ್ಚಿನ ತ್ಯಾಜ್ಯ ವಿಲೇವಾರಿಯಾಗಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ನಾವೆಲ್ಲರೂ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಏನೂ ಕೊಡದಿದ್ದರೂ ಉತ್ತಮ ಪರಿಸರವನ್ನಾದರೂ ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ತುಮಕೂರಿನ ಎಲ್ಲಾ ಕೆರೆಗಳ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಕೆರೆ-ಕಟ್ಟೆಗಳನ್ನು ಹೊಸದಾಗಿ ನಿರ್ಮಾಣ ಮಾಡಲು ಸಾಧ್ಯವಿಲ್ಲದಿದ್ದರೂ ಇರುವ ಕೆರೆಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಪುನಃಶ್ಚೇತನಗೊಳಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದAತೆ ಕೆರೆ-ಕುಂಟೆಗಳನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಆಸ್ತಿಯಾದ ಕೆರೆಗಳ ಮೇಲೆ ಮನೆಗಳನ್ನು ನಿರ್ಮಾಣ ಮಾಡಿದರೆ ಕೆರೆಗಳನ್ನು ಉಳಿಸುವುದಾದರೂ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಕಳೆದ 3 ವರ್ಷಗಳಿಂದ ಕೆರೆ ಒತ್ತುವರಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಹಲವಾರು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಮಂದಗತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಬೇಸರದ ಸಂಗತಿ. ಜಿಲ್ಲೆಯಲ್ಲಿ ಸುಮಾರು ಕೆರೆಗಳ ಸಮೀಕ್ಷೆ ಪೂರ್ಣಗೊಂಡಿಲ್ಲ. ಸಮೀಕ್ಷೆ ಮಾಡಿದ ಕೆರೆಗಳ ಒತ್ತುವರಿ ಇನ್ನೂ ತೆರವಾಗಿಲ್ಲ. ಕೆರೆಗಳ ಪುನಃಶ್ಚೇತನವೂ ಆಗಿಲ್ಲ. ಸೂಕ್ತ ಕ್ರಮ ಕೈಗೊಳ್ಳದ ಅಧಿಕಾರಿಗಳಿಂದ ಕೆರೆಗಳ ಅಭಿವೃದ್ಧಿ ಹೇಗೆ? ನೀರಿನ ಸಮಸ್ಯೆಗೆ ಪರಿಹಾರ ಹೇಗೆ? ಈ ನಿಟ್ಟಿನಲ್ಲಿ ಅಧಿಕಾರಿಗಳು ಸುಧಾರಿಸಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಯಾವುದೇ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದಲ್ಲಿ ಹುದ್ದೆಯಲ್ಲಿ ಮುಂಬಡ್ತಿ, ವೇತನ ಬಡ್ತಿ, ವಯೋ ನಿವೃತ್ತಿ ವೇತನದಿಂದ ವಂಚಿತರಾಗಬೇಕಾಗುತ್ತದೆ. ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಪೂರಕವಾಗಿ ಕೆಲಸ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಅಧಿಕಾರಿಗಳು ಜನರ ಶಾಪಕ್ಕೆ ಗುರಿಯಾಗಿ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡದೆ ಜಿಲ್ಲೆಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರೋಗಿಗಳು ಭೇಟಿ ನೀಡಿದಾಗ ವೈದ್ಯರು ಲಭ್ಯವಿರದೆ, ತುರ್ತು ಚಿಕಿತ್ಸೆ ದೊರೆಯದೆ ಎಷ್ಟೋ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಂದಿವೆ. ರೋಗಿಗಳು ಒಳರೋಗಿಯಾಗಿ ದಾಖಲಾಗಲು ಹಣ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದಕ್ಕೂ ಹಣ ಬಿಚ್ಚಿದರೆ ಮಾತ್ರ ಚಿಕಿತ್ಸೆ ಎಂಬಂತಾಗಿದೆ. ಆಸ್ಪತ್ರೆ ಸಿಬ್ಬಂದಿಗಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅನುಸರಣೆ ಮಾಡಲು ಆಸ್ಪತ್ರೆಗಳು, ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲು ಎಲ್ಲ ಜಿಲ್ಲೆಯ ಲೋಕಾಯುಕ್ತ ಎಸ್‌ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರಲ್ಲದೆ ಆಸ್ಪತ್ರೆಗಳು ಸುವ್ಯವಸ್ಥಿತವಾಗಿರಬೇಕು. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆ, ಕಚೇರಿಗಳಿಗೆ ಮತ್ತೆ-ಮತ್ತೆ ಭೇಟಿ ನೀಡಿ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದಲ್ಲದೆ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ ಯಾವುದೇ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಕಚೇರಿ, ಭೂದಾಖಲೆಗಳ ಇಲಾಖೆಯಲ್ಲಿ ಸಾರ್ವಜನಿಕರ ಬಹಳಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಸಕಾರಣವಿಲ್ಲದೆ ಸಾರ್ವಜನಿಕ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಸುಖಾಸುಮ್ಮನೆ ಜನರನ್ನು ಕಚೇರಿಗೆ ಅಲೆದಾಡಿಸಲಾಗುತ್ತಿದೆ. ತಾಲ್ಲೂಕು ತಹಶೀಲ್ದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿ ಅರ್ಜಿಯನ್ನು ವಿಲೇವಾರಿ ಮಾಡುವಲ್ಲಿ ಏಕಾಏಕಿ ತಿರಸ್ಕರಿಸದೆ ಸಾರ್ವಜನಿಕರೊಂದಿಗೆ ಧನಾತ್ಮಕವಾಗಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಲೋಕಾಯುಕ್ತದಿಂದ ಇತ್ತೀಚೆಗಷ್ಟೆ ರಾಜ್ಯದ 18 ಗ್ರಾಮ ಪಂಚಾಯತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಯಿತು. ಯಾವುದೇ ಒಂದು ಗ್ರಾಮ ಪಂಚಾಯತಿಯಲ್ಲಿಯೂ ಸಮರ್ಪಕ ದಾಖಲೆಗಳನ್ನು ನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿದೆ. ನಗದು ಪುಸ್ತಕದಲ್ಲಿ ಪಂಚಾಯತಿಗೆ ಹಣ ಸಂದಾಯ ಹಾಗೂ ವೆಚ್ಚದ ಮಾಹಿತಿಗಳೇ ಇಲ್ಲ. ಪಂಚಾಯತಿ ಆಸ್ತಿಗಳ ಬಗ್ಗೆಯೂ ಸೂಕ್ತ ದಾಖಲೆಗಳಿಲ್ಲ ಎಂದು ಅಧಿಕಾರಿಗಳ ಬೇಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಕಚೇರಿಗಳಲ್ಲಿ ಎಲ್ಲದಕ್ಕೂ ಸೂಕ್ತ ದಾಖಲೆಗಳಿರಬೇಕು. ಪಾರದರ್ಶಕತೆಯಿಂದ ಸೇವೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತುಮಕೂರು ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ದೊರೆತಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲೆಯ ಜನಸಂಖ್ಯೆ, ಆರೋಗ್ಯ, ಶೈಕ್ಷಣಿಕ ಪ್ರಗತಿ, ಕೃಷಿ ಪ್ರಗತಿ, ಪ್ರಮುಖ ಬೆಳೆ, ಶಾಲಾ-ಕಾಲೇಜುಗಳ ವಿವರ, ನೀರಿನ ಸಮಸ್ಯೆ, ವಸತಿ ನಿಲಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಆರೋಗ್ಯ ತುಮಕೂರು ಅಭಿಯಾನದ ರೂಪು-ರೇಷೆ, ಸಾಧನೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಲೋಕಾಯುಕ್ತ ಎಸ್‌ಪಿ ಎ.ವಿ. ಲಕ್ಷ್ಮೀ ನಾರಾಯಣ ಸೇರಿದಂತೆ ಮತ್ತಿತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours