ತುಮಕೂರು: ಅಪ್ಪ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ

1 min read

 

ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಹಾಗೂ ಅಪೂರ್ವ ಪ್ರಕಾಶನದಿಂದ ‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ

Tumkurnews
ತುಮಕೂರು: ಸಿದ್ಧ ಮಾದರಿಯ ಸಾಮಾಜಿಕ ಸಂರಕ್ಷಣೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದನ್ನು ಮೀರಿ ಬೆಳೆಯುವಂತಹ ಮನೋಭೂಮಿಕೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಇರುವವರು ಬೆಳೆಸಿಕೊಳ್ಳಬೇಕು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ! ವಿಡಿಯೋ

ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಹಾಗೂ ಅಪೂರ್ವ ಪ್ರಕಾಶನ ಇವರ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ಜನ ಸಾಮಾಜಿಕ ಸಂರಚನೆಯ ಒಳಗಡೆಯೇ ಇದ್ದಾರೆ. ಅದನ್ನು ದಾಟಿ ಹೊರಬರುತ್ತಿಲ್ಲ. ಆದರೆ ಅದನ್ನು ದಾಟಿ ಹೊರಬರುವ ಕೆಲಸವನ್ನು ಸಾಹಿತಿಗಳು ಮಾಡಬೇಕಿದೆ ಎಂದರು.
ನಾವುಗಳು ಯಾರೂ ಸಹ ಕಾಲವನ್ನು ಮೀರಿ ಬದುಕಬೇಕಿಲ್ಲ. ಕಾಲದೊಳಗೆ ಇದ್ದು, ಕಾಲವನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಏನೆಲ್ಲಾ ಇದ್ದವು ಎಂಬುದನ್ನು ಅವಲೋಕಿಸಬೇಕು. ಸತಿ ಪದ್ಧತಿ, ಬೆತ್ತಲೆ ಸೇವೆ, ದೇವದಾಸಿ ಇವೆಲ್ಲವೂ ಎಷ್ಟು ಅಮಾನವೀಯ ಎಂಬುದು ಗೊತ್ತಿದೆ. ದೇವದಾಸಿ ಇನ್ನೂ ಜೀವಂತ ಇದೆ. ಇವನ್ನೆಲ್ಲ ಗ್ರಹಿಸುತ್ತಲೇ ಕಾಲಘಟ್ಟದೊಳಗೆ ಇದ್ದು, ಅದನ್ನು ಮೀರುವ ಮನೋಭೂಮಿಕೆಯನ್ನು ಸಾಧ್ಯವಾಗಿಸುವುದಾದರೆ ಅದೇ ನಿಜವಾದ ಸಾಹಿತ್ಯ ಮತ್ತು ಮಾನವೀಯತೆ ಎಂದರು.
ನಾವು ಕಾಲದ ಜೊತೆಗೆ ಬದುಕಬೇಕು. ಬೆಳವಣಿಗೆಗಳಿಗೆ ಮುಖಾಮುಖಿಯಾಗಬೇಕು. ಅನುಸಂಧಾನ ನಡೆಯಬೇಕು. ಆಗ ಮಾತ್ರ ಚಲನಶೀಲ ಮತ್ತು ಸೃಜನಶೀಲ ಕೃತಿ ಕೊಡಲು ಸಾಧ್ಯ ಎಂದರು.
ಬರಹಗಾರರು ಸಿದ್ಧ ಮಾದರಿಯನ್ನು ಮೀರಿ ಬೆಳೆಯುವುದನ್ನು ಕಲಿಯಬೇಕು. ಸಿದ್ಧ ಮಾದರಿಯ ಸಂಸ್ಕೃತಿಯ ಆಚೆಗೂ ಒಂದು ದಾರಿ ಇದೆ ಎಂಬುದನ್ನು ಕಂಡುಕೊಳ್ಳಬೇಕು. ನಮ್ಮೆದುರು ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ. ಅದರ ಹಿಂದೆ ಮತ್ತೊಂದು ಸತ್ಯ ಇದೆ ಎಂಬುದನ್ನು ಹುಡುಕಬೇಕು. ಹೀಗೆ ಸತ್ಯವನ್ನು ಹುಡುಕುವ ಸೃಜನಶೀಲತೆಯನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅವರು ನಿಜವಾದ ಸಾಹಿತಿಗಳಾಗಲು ಸಾಧ್ಯ ಎಂದು ಬಣ್ಣಿಸಿದರು.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಹಿಂದೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಅಮ್ಮನ ಕೈಲಿತ್ತು. ಈಗ ಅಪ್ಪ ಮತ್ತು ಅಮ್ಮ ಇಬ್ಬರ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಅಪ್ಪನನ್ನು ಸ್ಮರಿಸುವ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕಾಯಕ ಒಳ್ಳೆಯ ಬೆಳವಣಿಗೆ. ರಾಜ್ಯ ಮಟ್ಟದ ಈ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ತುಮಕೂರಿನಲ್ಲಿಯೇ ಆಯೋಜಿಸಿ ನಾಲ್ಕು ಮಂದಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ. ನಾಲ್ವರಲ್ಲಿ ಒಬ್ಬರು ತುಮಕೂರು ಜಿಲ್ಲೆಯವರು ಎಂಬುದು ನಮಗೆ ಮತ್ತಷ್ಟು ಸಂಭ್ರಮ ಎಂದು ವ್ಯಾಖ್ಯಾನಿಸಿದರು.

ತುಮಕೂರು: ಕಿಕ್ಕಿರಿದು ತುಂಬಿದ್ದ ಬಸ್ ನಿಲ್ದಾಣ ಹತ್ತೇ ನಿಮಿಷದಲ್ಲಿ ಖಾಲಿ! ವಿಡಿಯೋ
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಅಪ್ಪ ಪ್ರಶಸ್ತಿಗೆ ತಜ್ಞರ ಸಮಿತಿಯನ್ನು ನೇಮಿಸುವ ಬದಲು ಓದುಗರಿಗೆ ಆಯ್ಕೆ ಸ್ವಾತಂತ್ರ್ಯ ನೀಡಿರುವುದು ಅತ್ಯದ್ಬುತ ಕಾರ್ಯ. ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಅರ್ಹರಿಗೆ ಪ್ರಶಸ್ತಿ ನೀಡುತ್ತಿರುವುದು ಮತ್ತು ಅದರ ಹಿಂದಿನ ಮಾನದಂಡವನ್ನು ನೋಡಿದರೆ ಅತ್ಯಂತ ಖುಷಿಯಾಗುತ್ತದೆ ಎಂದರು.
ನೂರು ಕೃತಿಗಳನ್ನು ಬರೆದೂ ಅವುಗಳು ಜನಮನ್ನಣೆ ಗಳಿಸದಿದ್ದರೆ ಪ್ರಯೋಜನವಿಲ್ಲ. ಇಲ್ಲಿ ನೀಡುತ್ತಿರುವ ಪ್ರಶಸ್ತಿ ಪುರಸ್ಕೃತರ ಕೃತಿಗಳನ್ನು ಗಮನಿಸಿದರೆ ಅದಕ್ಕೆ ತನ್ನದೇ ಆದ ಮೌಲ್ಯಗಳು ಇರುವುದನ್ನು ಗಮನಿಸಬಹುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಪ್ಪ ಪ್ರಶಸ್ತಿ ಸಂಸ್ಥಾಪಕ ಸಂಚಾಲಕರು, ಬಹುಮುಖಿ ಗೆಳೆಯರ ಬಳಗದ ರೂವಾರಿಗಳೂ ಆದ ಸಾಹಿತಿ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ, ಬಹುತೇಕ ಎಲ್ಲರೂ ಅಮ್ಮನನ್ನು ಸ್ಮರಿಸಿಕೊಳ್ಳುತ್ತಾರೆ. ಅಮ್ಮಂದಿರ ದಿನಾಚರಣೆ ಆಚರಿಸುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಅಪ್ಪಂದಿರ ಜವಾಬ್ದಾರಿಯೂ ಬದಲಾಗಿದ್ದು, ಈ ಸನ್ನಿವೇಶದಲ್ಲಿ ಅಪ್ಪಂದಿರನ್ನು ಸ್ಮರಿಸುವ ಕಾರ್ಯವೂ ಆಗಬೇಕು. ಇದು ತಾರತಮ್ಯವಲ್ಲ. ಒಂದು ಕುಟುಂಬದಲ್ಲಿ ಇಬ್ಬರೂ ಸಮಾನರು ಎಂಬುದನ್ನು ಒಪ್ಪಿಕೊಳ್ಳುತ್ತಲೇ ಅಪ್ಪನ ಜವಾಬ್ದಾರಿಗಳನ್ನು ಗುರುತಿಸುವ ಹೊಣೆಗಾರಿಕೆಯೂ ಇದಾಗಿದೆ ಎಂದು ವಿವರಿಸಿದರು.
ಅತಿಥಿಗಳಾಗಿದ್ದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಕೌಟುಂಬಿಕ ವ್ಯವಸ್ಥೆಗಳು ಕ್ಷೀಣಿಸುತ್ತಿರುವ ಈ ದಿನಮಾನಗಳಲ್ಲಿ ಅಪ್ಪ, ಅಮ್ಮನ ಪಾತ್ರಗಳನ್ನು ಗುರುತಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾದುದು. ಆ ಮೂಲಕ ಕೌಟುಂಬಿಕ ವಾತಾವರಣವನ್ನು ಸುಸ್ಥಿತಿಯಲ್ಲಿ ಇಡುವುದು, ಕುಟುಂಬ ಪ್ರೀತಿಯನ್ನು ಹೆಚ್ಚಿಸುವುದು ಸದುದ್ದೇಶ. ನಾವು ಕಳೆದ 23 ವರ್ಷಗಳಿಂದ ಸಾಂತ್ವನ ಸಲಹಾ ಕೇಂದ್ರ ನಡೆಸಿಕೊಂಡು ಬಂದಿದ್ದೇವೆ. 9400 ಪ್ರಕರಣಗಳು ಇಲ್ಲಿ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಅತ್ತೆಯಂದಿರೆ ವಿಲನ್ ಆಗಿದ್ದಾರೆ. ಇದರ ಹಿಂದಿನ ಗುಣಾವ ಗುಣಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಎಲ್ಲರಲ್ಲಿಯೂ ಎಲ್ಲರೂ ಪ್ರೀತಿ ಹುಡುಕುವ ಔದಾರ್ಯ ತೋರಬೇಕು ಎಂದರು.
ಹಿರಿಯ ಲೇಖಕ ಡಾ.ಅಮ್ಮಸಂದ್ರ ಸುರೇಶ್ ಅತಿಥಿಗಳಾಗಿ ಮಾತನಾಡಿದರು. ಬಹುಮುಖಿ ಗೆಳೆಯರ ಬಳಗದ ಸಂಚಾಲಕರು, ಮೈಸೂರಿನ ಸಾಹಿತಿ ಟಿ.ಸತೀಶ್ ಜವರೇಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು. ದಂಡಿನಶಿವರ ಮಂಜುನಾಥ್ ಸ್ವಾಗತಿಸಿದರು. ಕೆ.ವಿ.ವಿವೇಕ ಹಾಗೂ ಆರ್.ಜಿ.ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಎ.ಆರ್.ರಂಗಸ್ವಾಮಿ ವಂದಿಸಿದರು. ಹೆಚ್.ಎಂ.ವಸಂತ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಎಂ.ವೈ.ಗಂಗಣ್ಣ, ಎಸ್.ಎನ್.ದೇವರಾಜು ಅವರಿಂದ ಗೀತಗಾಯನ ನಡೆಯಿತು.
ಪ್ರಶಸ್ತಿ ಪುರಸ್ಕೃತರು: ನೆಲದಾಯ ಪರಿಮಳ ಕೃತಿಯ ಸ್ಮಿತ ಅಮೃತರಾಜ್, ದೀಡೆಕೆರೆ ಜಮೀನು ಕೃತಿಯ ಮಲ್ಲಿಕಾರ್ಜುನ ಶಲ್ಲಿಕೇರಿ, ಕನ್ನಡ ನಾಟಕಗಳು ಕೃತಿಯ ಲೇಖಕ ಡಾ.ಟಿ.ವೆಂಕಟೇಶಮೂರ್ತಿ, ಟ್ರಂಕು ತಟ್ಟೆ ಕೃತಿಯ ಕತೃ ಗುರುಪ್ರಸಾದ್ ಕಂಟಲಗೆರೆ ಅವರಿಗೆ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

About The Author

You May Also Like

More From Author

+ There are no comments

Add yours