ಅಧಿಕಾರಿಗಳು ಬಡವರ ಪರ ಕೆಲಸ ಮಾಡಬೇಕು: ಸಚಿವ ಡಾ: ಜಿ. ಪರಮೇಶ್ವರ್
Tumkurnews
ತುಮಕೂರು: ರಾಜ್ಯ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನಕಲ್ಯಾಣ ಕಾರ್ಯಕ್ರಮಗಳು ಜನರಿಗೆ ತಲುಪುವ ಹಾಗೆ ಅಧಿಕಾರಿಗಳು ಕೆಲಸ ಮಾಡಬೇಕು. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಮನಸ್ಥಿತಿಯನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಕರ್ತವ್ಯ ನಿರ್ಲಕ್ಷ್ಯ, ವಿಳಂಬ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಸಮುದಾಯದ ಅಭಿಪ್ರಾಯ ಸರ್ಕಾರದ ಪರ ಇರಬೇಕು. ಹಾಗಾಗಬೇಕಾದಲ್ಲಿ ಜನರ ಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು. ಆಡಳಿತ ಚುರುಕುಗೊಳ್ಳಬೇಕು ಎಂದು ತಿಳಿಸಿದರು.
ನಟ ದರ್ಶನ್’ಗೆ ಪೊಲೀಸ್ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ: ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ
ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಸಿಇಓ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಬೇಕು. ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳು ತಾವು ಎಷ್ಟರ ಮಟ್ಟಿಗೆ ತಮ್ಮ ಇಲಾಖಾ ಕೆಲಸ ಕಾರ್ಯವನ್ನು ಮಾಡಿದ್ದೇವೆ ಎಂಬುದರ ಕುರಿತು ತಮಗೆ ತಾವೇ ರೇಟಿಂಗ್ ಕೊಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಉಪವಿಭಾಗಾಧಿಕಾರಿಗಳು ಶಾಲಾ, ಕಾಲೇಜು, ಹಾಸ್ಟೆಲ್‍ಗಳನ್ನು ತಪಾಸಣೆ ಮಾಡಬೇಕು. ಕಂದಾಯ ಇಲಾಖೆಗೆ ಮಾತ್ರ ಸೀಮಿತವಾಗಬಾರದು. ಡಿಡಿಪಿಐಗಳು ಜಿಲ್ಲೆಯಾದ್ಯಂತ ಸಂಚರಿಸಿ ಶಾಲಾ ಭೇಟಿ ಪ್ರವಾಸ ಕೈಗೊಳ್ಳಬೇಕು. ಗಣಿತ, ಇಂಗ್ಲೀಷ್ ವಿಷಯಗಳಿಗೆ ಸಂಬಂಧಿಸಿದಂತೆ ಓರಿಯಂಟೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸುವಿಕೆ ಮತ್ತು ವಿದ್ಯುದ್ದೀಕರಣ ವಿಳಂಬವಾಗಬಾರದು. ಜನರಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು. ಜಿಲ್ಲಾಧಿಕಾರಿಗಳು ಪಹಣಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಚಿತ್ರನಟ ದರ್ಶನ್, ಪವಿತ್ರಾಗೌಡ ಬಂಧನ
ಹಾಲು ಉತ್ಪಾದನಾ ಸಮಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಲು ಉತ್ಪಾದಕ ರೈತರನ್ನು ನೋಂದಣಿ ಮಾಡಿಸಬೇಕು. ಈ ಸಮುದಾಯದ ಜನರು ಹಾಲು ಉತ್ಪಾದನಾ ಸಮಿತಿಗಳಲ್ಲಿ ನೋಂದಣಿಯಾಗದಿದ್ದಲ್ಲಿ ಅವರು ಯಶಸ್ವಿನಿ ಯೋಜನೆ ಹಾಗೂ ಸರ್ಕಾರದ ಪ್ರೋತ್ಸಾಹಧನದಿಂದ ವಂಚಿತರಾಗುತ್ತಾರೆ. ಆದುದರಿಂದ ನೋಂದಣಿ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೆಎಂಎಫ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಸ್ಪತ್ರೆಯ ವಾತಾವರಣ ಮತ್ತಷ್ಟು ಉತ್ತಮಗೊಳ್ಳಬೇಕು. ಸ್ವಚ್ಛತೆ ಕಾಣಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪಿಹೆಚ್‍ಸಿಗಳನ್ನು ನಿಯಮಿತವಾಗಿ ಭೇಟಿ ಮಾಡಬೇಕು. ಭೇಟಿ ಮಾಡಿದ ವಿವರಗಳನ್ನು ಮುಂದಿನ ಸಭೆಯಲ್ಲಿ ತಮಗೆ ಸಲ್ಲಿಸುವಂತೆ ಸೂಚಿಸಿದರು.
ಪಾಲಿಕೆ ಆಯುಕ್ತರು ಅಧಿಕಾರಿಗಳೊಂದಿಗೆ ಪ್ರತಿ ದಿನ ಕನಿಷ್ಟ 2 ವಾರ್ಡ್‌ಗಳಿಗೆ ಭೇಟಿ ನೀಡಬೇಕು ಮತ್ತು ಜನರ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದರು.
ಪಾವಗಡ: ಜನಸ್ಪಂದನ ಕಾರ್ಯಕ್ರಮಗಳು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು
ಕುಡಿಯುವ ನೀರು ಪೂರೈಕೆಯಾಗುವ ಪೈಪುಗಳ ಬಳಿ ಡ್ರೈನೆಜ್ ಪೈಪುಗಳು ಅಳವಡಿಸಿದ್ದಲ್ಲಿ ಪರಿಶೀಲಿಸಿ ತೆರವುಗೊಳಿಸಬೇಕು. ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಆದಂತಹ ಘಟನೆ ಜಿಲ್ಲೆಯಲ್ಲಿ ಮತ್ತೊಮ್ಮೆ ಮರುಕಳಿಸಬಾರದು ಎಂದು ತಿಳಿಸಿದರು.
ರೈತರ ಆಧಾರ್ ಸೀಡಿಂಗ್ ಕಾರ್ಯ ಚುರುಕುಗೊಳ್ಳಬೇಕು. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವಂತಹ ಶುದ್ಧ ಕುಡಿಯುವ ನೀರು ಘಟಕಗಳನ್ನು ಗ್ರಾಮಪಂಚಾಯತಿಗೆ ವಹಿಸಿ ನಿರ್ವಹಣೆಗೆ ನೀಡಬೇಕು. ಆರ್‍ಓ ಮೆಂಬ್ರೇನ್‍ಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಬದಲಾಯಿಸಬೇಕು ಎಂದು ತಿಳಿಸಿದರು.
ಅನಧಿಕೃತವಾಗಿ ವಾಣಿಜ್ಯ ಬಳಕೆಗಾಗಿ ಹೋಟೆಲ್‍ಗಳು ಮತ್ತು ಕಲ್ಯಾಣ ಮಂಟಪಗಳು ಸ್ಥಳೀಯ ಆಡಳಿತದ ಕುಡಿಯುವ ನೀರಿನ ಮುಖ್ಯ ಲೈನ್‍ಗಳ ಮೂಲಕ ನೀರನ್ನು ಬಳಸಿಕೊಳ್ಳುತ್ತಿದ್ದಲ್ಲಿ ಅಂತಹ ಸಂಪರ್ಕಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಬೇಕು. ವಾಣಿಜ್ಯ ಬಳಕೆ ನಿರ್ಬಂಧಿಸಿದಲ್ಲಿ ಎಲ್ಲಾ ವಾರ್ಡ್‌ಗಳಿಗೆ ನೀರು ಒದಗಿಸಬಹುದು ಎಂದು ಸಚಿವರು ತಿಳಿಸಿದರು.
ತುಮಕೂರು: ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಜಿಲ್ಲೆಯಾದ್ಯಂತ 21 ಮೇವು ಬ್ಯಾಂಕ್‍ಗಳನ್ನು ತೆರೆಯಲಾಗಿದ್ದು, 6915 ಟನ್ ಮೇವನ್ನು ಖರೀದಿ ಮಾಡಿ ರೈತರಿಗೆ ಈಗಾಗಲೇ ವಿತರಿಸಲಾಗಿದ್ದು, 8.29 ಕೋಟಿ ರೂ.ಗಳ ಪೈಕಿ 3 ಕೋಟಿಗಳನ್ನು ಮಾತ್ರ ಮೇವು ವಿತರಣೆ ಮಾಡುವವರಿಗೆ ಪಾವತಿಸಲಾಗಿದ್ದು, ಬಾಕಿ ಮೊತ್ತವನ್ನು ಶೀಘ್ರವಾಗಿ ಪಾವತಿಸಲು ಸೂಚಿಸಿದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 24 ಕೋಟಿ ಹಣವಿದ್ದು, ಇದನ್ನು ಮೇವು ಬ್ಯಾಂಕ್, ಕುಡಿಯುವ ನೀರು ಮುಂತಾದ ಕಾರ್ಯಗಳಿಗೆ ತಹಶೀಲ್ದಾರರು ಖರ್ಚು ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲಿಯೂ ರಸಗೊಬ್ಬರ ಪೂರೈಕೆ, ಬಿತ್ತನೆ ಬೀಜ ಮತ್ತು ಔಷಧಿಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಶೇ.2ರಷ್ಟನ್ನು ಶಾಲಾ ಅಭಿವೃದ್ಧಿಗೆ ನೀಡಬೇಕು. ಈಗಾಗಲೇ 189 ಶಾಲೆಗಳಿಗೆ 26.26 ಕೋಟಿ ಸಿಎಸ್‍ಆರ್ ನಿಧಿ ವ್ಯಯಿಸಲು ಕಂಪನಿಗಳು ಮುಂದೆ ಬಂದಿದ್ದು, ಉಳಿದ ಕಂಪನಿಗಳೂ ಸಹ ಶಾಲೆಗಳ ಮೂಲ ಸೌಕರ್ಯ ಕಲ್ಪಿಸಲು ಮುಂದೆ ಬರಬೇಕಿದ್ದು, ಈ ಸಂಬಂಧ ನಿಯಮಾನುಸಾರ ಸಿಎಸ್‍ಆರ್ ನಿಧಿ ನೀಡದ ಕಂಪನಿಗಳಿಗೆ ನೋಟೀಸ್ ನೀಡುವಂತೆ ಕೈಗಾರಿಕಾ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಹೆಚ್ಚು ಬಸ್‍ಗಳನ್ನು ಓಡಿಸಬೇಕು. ಈಗಾಗಲೇ 61 ಹೊಸ ಬಸ್‍ಗಳು ಬಂದಿದ್ದು, ಮತ್ತಷ್ಟು ಹೊಸ ಬಸ್‍ಗಳಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗೆ ಸೂಚಿಸಿದರು.
ರಾಯದುರ್ಗ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಜಮೀನುಗಳನ್ನು ಹೊರತುಪಡಿಸಿ ಪ್ರತಿ 10 ಕಿ.ಮೀ. ವ್ಯಾಪ್ತಿಯ ಜಮೀನುಗಳನ್ನು ಭೂಸ್ವಾಧೀನಪಡಿಸಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಯುವನಿಧಿ ಯೋಜನೆಯ ನೋಂದಣಿ ಕಡಿಮೆಯಿದ್ದು, ನಿರುದ್ಯೋಗಿ ಯುವಕರ ನೋಂದಣಿ ಹೆಚ್ಚಾಗಬೇಕು. ಅನರ್ಹ ಬಿಪಿಎಲ್ ಕಾರ್ಡ್ ಪಡೆದಿರುವವರನ್ನು ಪತ್ತೆ ಹಚ್ಚಬೇಕು ಮತ್ತು ಕಾರ್ಡ್ ರದ್ದುಗೊಳಿಸಬೇಕು ಎಂದು ತಿಳಿಸಿದರು.
10ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ಸುಲಭವಾಗಬೇಕಿದ್ದಲ್ಲಿ ಅವರಿಗೆ 8ನೇ ತರಗತಿಯಿಂದಲೇ ಉತ್ತಮ ಶಿಕ್ಷಣ ದೊರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಬಾರದು. ಹಾಗಾದಲ್ಲಿ ಡಿಡಿಪಿಐ ಮತ್ತು ಬಿಇಓಗಳನ್ನು ನೇರ ಹೊಣೆ ಮಾಡಲಾಗುವುದು. ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಕ್ರಮವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
+ There are no comments
Add yours