ತುಮಕೂರು: ಕಲುಷಿತ ನೀರು ಕುಡಿದು ಇಬ್ಬರ ಸಾವು, ಇಬ್ಬರು ಅಮಾನತು: ಪರಂ ಭೇಟಿ

1 min read

 

ಚಿನ್ನೇನಹಳ್ಳಿ ಕಲುಷಿತ ನೀರು ಪ್ರಕರಣ: ಇಬ್ಬರು ಸಾವು: ಇಬ್ಬರು ಸಸ್ಪೆಂಡ್: ಅಸ್ವಸ್ಥರ ಭೇಟಿ ಮಾಡಿದ ಪರಂ

Tumkurnews
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಉತ್ತಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿನ್ನೇನಹಳ್ಳಿ ಗ್ರಾಮದ ಜನರು ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ ಧೈರ್ಯ ಹೇಳಿದರಲ್ಲದೆ ರೋಗಿಗಳ ಕುಟುಂಬದವರಿಂದಲೂ ಮಾಹಿತಿ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಕಲುಷಿತ ನೀರು ಸೇವಿಸಿ ಸುಮಾರು 100ಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಕಾರಣ ಕೆಲವರು ಮಧುಗಿರಿ, ಕೊರಟಗೆರೆ, ತುಮಕೂರಿನ ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ವಿಷಯ ತಿಳಿದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥರಾಗಿದ್ದವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಂಡಿದ್ದಾರೆ.
ವಾಂತಿ-ಭೇದಿಯಿಂದ ಜಿಲ್ಲಾಸ್ಪತ್ರೆಗೆ ದಾಖಲಾದವರ ಪೈಕಿ 76 ವರ್ಷದ ಚಿಕ್ಕದಾಸಪ್ಪ ಹಾಗೂ 72 ವರ್ಷದ ಪೆದ್ದಣ್ಣ ಎಂಬುವರು ಮೃತಪಟ್ಟಿದ್ದಾರೆ. ಇವರಿಬ್ಬರೂ ವಯೋವೃದ್ಧರಾದ ಕಾರಣ ರೋಗದ ತೀವ್ರತೆಯನ್ನು ತಡೆಯಲಾರದೆ ಮೃತಪಟ್ಟಿರುವ ಸಾಧ್ಯತೆಯಿದೆಯೆಂದು ತಿಳಿಸಿದರು.

ನಟ ದರ್ಶನ್’ಗೆ ಪೊಲೀಸ್ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ: ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ
ಗ್ರಾಮದ ಓವರ್ ಹೆಡ್ ಟ್ಯಾಂಕ್‍ನಿಂದ ಪೂರೈಕೆಯಾದ ಕಲುಷಿತ ನೀರಿನಿಂದಲೇ ಈ ಅವಘಡ ಸಂಭವಿಸಿದೆ. ಓವರ್ ಹೆಡ್ ಟ್ಯಾಂಕ್ ನೀರು ಹಾಗೂ ಆರ್‍ಓ ಪ್ಲಾಂಟ್ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದು, ಓವರ್ ಹೆಡ್ ಟ್ಯಾಂಕ್ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದಿದೆ. ಕಲುಷಿತ ನೀರು ಪೂರೈಕೆ ಮಾಡುವಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಕರ್ತವ್ಯ ನಿರ್ಲಕ್ಷತೆ ತೋರಿರುವ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ನೀರು ಗಂಟಿಯನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೆ ಗ್ರಾಮದ ಓವರ್ ಹೆಡ್ ಟ್ಯಾಂಕಿನ ನೀರನ್ನು ಕುಡಿಯಲು ಬಳಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮಕ್ಕೆ ಪೂರೈಕೆ ಮಾಡುವ ಕುಡಿಯುವ ನೀರಿನ ಕೊಳವೆ ಮಾರ್ಗಕ್ಕೆ ಕಲುಷಿತ ನೀರು ಮಿಶ್ರಿತವಾಗಿರುವುದೇ ವಾಂತಿ-ಭೇದಿ ಪ್ರಕರಣಕ್ಕೆ ಕಾರಣವಾಗಿದೆ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ. ಕುಡಿಯುವ ನೀರು ಸಂಪರ್ಕ ನೀಡುವ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಸಂದರ್ಭದಲ್ಲಿ ಕೊಳವೆ ಮಾರ್ಗ ಒಡೆದು ಹೋಗಿ ನೀರು ಕಲುಷಿತ ನೀರು ಮಿಶ್ರಿತವಾಗಿರುವ ಸಾಧ್ಯತೆ ಇದೆ. ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ದಾಖಲಾದವರು ಗುಣಮುಖ ಹೊಂದುತ್ತಿದ್ದಾರೆ ಎಂದು ತಿಳಿಸಿದರು.

ಚಿತ್ರನಟ ದರ್ಶನ್, ಪವಿತ್ರಾಗೌಡ ಬಂಧನ

ಕಲುಷಿತ ನೀರಿನಿಂದ ಚಿನ್ನೇನಹಳ್ಳಿ ವಾಂತಿ-ಭೇದಿ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತೊಮ್ಮೆ ಮರುಕಳಿಸದಂತೆ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಗಾ ವಹಿಸಬೇಕು. ವಿವಿಧ ಇಲಾಖೆಗಳು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಹಾಗೂ ಆರ್.ಓ.ಪ್ಲಾಂಟ್‍ಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಬಂಧನ ಸಾಧ್ಯತೆ: ಪರಮೇಶ್ವರ್ ಹೇಳಿದ್ದೇನು? ವಿಡಿಯೋ
ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ಜೂನ್ 14ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಈ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಾಗುವುದು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲವೆಂದು ಸಾರ್ವಜನಿಕ ದೂರುಗಳಿದ್ದು, ಈ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಗುವುದು ಎಂದರು.

ತುಮಕೂರು: ಶಾಲಾಕಾಲೇಜುಗಳ ಆವರಣ ಸ್ವಚ್ಛವಾಗಿಡಿ; ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
ವಾಂತಿ-ಭೇದಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವರು ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲಾ ಇಲಾಖಾಧಿಕಾರಿ, ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸೇವೆಯಲ್ಲಿ ನಿರ್ಲಕ್ಷ ತೋರುವ ಹಾಗೂ ಶಿಸ್ತು ಉಲ್ಲಂಘನೆ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಶಸ್ತ್ರಚಿಕಿತ್ಸಕ ಅಸ್ಗರ್‍ ಬೇಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಚಿವರು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಜನರಲ್ ವಾರ್ಡ್, ಮಕ್ಕಳ ವಾರ್ಡ್‍ಗೆ ಭೇಟಿ ನೀಡಿ ರೋಗಿಗಳಿಗೆ ಶೀಘ್ರ ಗುಣ ಹೊಂದುತ್ತೀರಿ. ಯಾವುದೇ ಆತಂಕ ಬೇಡವೆಂದು ಧೈರ್ಯ ತುಂಬಿದರು.
ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಜಿಲ್ಲೆಯ ಮಧುಗಿರಿ ತಾಲ್ಲೂಕು ಚಿನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದಿದೆ. ಮಾಹಿತಿ ತಿಳಿದ ಕೂಡಲೇ ತಾಲ್ಲೂಕು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಂತಿ-ಭೇದಿಯಿಂದ ಅಸ್ವಸ್ಥರಾದವರ ಸೂಕ್ತ ಚಿಕಿತ್ಸೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಹಾಗೂ ಚಿಂತಾಜನಕ ಸ್ಥಿತಿಯಲ್ಲಿರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಚಿನ್ನೇನಹಳ್ಳಿಯಲ್ಲಿ ಒಟ್ಟು 108 ವಾಂತಿ-ಭೇದಿ ಪ್ರಕರಣಗಳು ಕಂಡುಬಂದಿದೆ. ಈ ಪೈಕಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 17 ಮಂದಿ ಒಳರೋಗಿಗಳಲ್ಲಿ ಬುಧವಾರ ಸಂಜೆ ಇಬ್ಬರು ಮೃತಪಟ್ಟಿದ್ದು, ಚೇತರಿಸಿಕೊಂಡ 4 ಮಂದಿ ಬಿಡುಗಡೆ ಹೊಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಒಬ್ಬ ರೋಗಿಯನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಹಾಗೂ ಮತ್ತೊಬ್ಬ ರೋಗಿಯನ್ನು ವಾಣಿವಿಲಾಸ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ 9 ರೋಗಿಗಳಲ್ಲಿ 4 ರೋಗಿಗಳು ತುರ್ತು ಚಿಕಿತ್ಸಾ ಘಟಕದಲ್ಲಿ ಹಾಗೂ 5 ರೋಗಿಗಳು ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮದಲ್ಲಿ ಬುಧವಾರ ರಾತ್ರಿ ಮತ್ತೆ 10 ಹೊಸ ಪ್ರಕರಣಗಳು ಕಂಡು ಬಂದಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈಗಲೂ ಸಹ ವೈದ್ಯರ ತಂಡವು ಸ್ಥಳದಲ್ಲಿದ್ದು, ಆರೋಗ್ಯ ಸಿಬ್ಬಂದಿ 24*7 ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ಕೈಗೊಂಡಿರುವ ನೀರಿನ ಸಂಪರ್ಕ ಕಾಮಗಾರಿಯನ್ನು ಹಾಗೂ ನಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಂಕರ್ ನೀರನ್ನು ಕುದಿಸಿ ಆರಿಸಿ ಕುಡಿಯಲು ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ರಾಮೇಗೌಡ ಮಾತನಾಡಿ, ವಾಂತಿ ಭೇದಿಯಿಂದ ಅಸ್ವಸ್ಥರಾದ ಚಿನ್ನೆನಹಳ್ಳಿ ಗ್ರಾಮದ 19 ಮಂದಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 14 ಮಂದಿ ಜನರಲ್ ವಾರ್ಡಿನಲ್ಲಿದ್ದು, ಗುಣಮುಖ ಹೊಂದುತ್ತಿದ್ದಾರೆ. ಉಳಿದೈದು ಮಂದಿ ತುರ್ತು ಚಿಕಿತ್ಸಾ ಘಟಕದಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ರೋಗಿಗಳು ಗುಣಮುಖ ಹೊಂದುತ್ತಿದ್ದಾರೆ ಎಂದು ತಿಳಿಸಿದರು.

 

About The Author

You May Also Like

More From Author

+ There are no comments

Add yours