ತುಮಕೂರುವರೆಗೂ ಮೆಟ್ರೋ ವಿಸ್ತರಣೆ!; ಎಲ್ಲಿಯವರೆಗೆ ಬರುತ್ತೆ ಗೊತ್ತೇ?
Tumkurnews
ತುಮಕೂರು; ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಮೆಟ್ರೋ ವಿಸ್ತರಣೆ ಕನಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಮತ್ತಷ್ಟು ಜೀವ ತುಂಬಿದ್ದಾರೆ.
ಬೆಂಗಳೂರಿನಿಂದ ತುಮಕೂರು ನಗರದ ವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕು ಎನ್ನುವುದು ಜಿಲ್ಲೆಯ ಜನತೆಯ ಬೇಡಿಕೆಯಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ತುಮಕೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾಗಿ ಸಾರಿಗೆ ವ್ಯವಸ್ಥೆಯೂ ಉತ್ತಮವಾಗಿರಬೇಕಿದೆ. ತುಮಕೂರು ನಗರದ ವರೆಗೆ ಮೆಟ್ರೋ ವಿಸ್ತರಣೆಯಾದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಮುಖ್ಯವಾಗಿ ವಸಂತ ನರಸಾಪುರ ಕೈಗಾರಿಕಾ ವಲಯಗಳಲ್ಲಿ ಕೈಗಾರಿಕೆಗಳ ಪ್ರಗತಿಗೆ ಕಾರಣವಾಗಲಿದೆ ಎನ್ನುವುದು ಕೈಗಾರಿಕೋದ್ಯಮಿಗಳ ಅಭಿಪ್ರಾಯ.
ಉದ್ಯೋಗಿಗಳಿಗೆ ವರ; ಪ್ರತಿನಿತ್ಯ ಸಾವಿರಾರು ಮಂದಿ ತುಮಕೂರಿನಿಂದ ಬೆಂಗಳೂರಿಗೆ ಉದ್ಯೋಗದ ನಿಮಿತ್ತ ಪ್ರಯಾಣಿಸುತ್ತಾರೆ. ತುಮಕೂರುವರೆಗೆ ಮೆಟ್ರೋ ವಿಸ್ತರಣೆಯಾದಲ್ಲಿ ಈ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ.
ಪರಮೇಶ್ವರ್ ಆಸಕ್ತಿ; ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆಯೂ ಗೃಹ ಸಚಿವರಾಗಿದ್ದ ವೇಳೆ ಅವರು ತುಮಕೂರು ವರೆಗೆ ಮೆಟ್ರೋ ವಿಸ್ತರಣೆಯ ಭರವಸೆ ನೀಡಿದ್ದರು. ಇದೀಗ ಪುನಃ ತಮ್ಮ ಕನಸಿನ ಯೋಜನೆಗೆ ಚಾಲನೆ ನೀಡಲು ಉತ್ಸಾಹ ತೋರುತ್ತಿದ್ದಾರೆ. ಈಚೆಗೆ ತುಮಕೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಾ.ಜಿ ಪರಮೇಶ್ವರ್ ಅವರು ಮೆಟ್ರೋ ವಿಸ್ತರಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೂ ಮೆಟ್ರೋ ವಿಸ್ತರಿಸುವ ಯೋಜನೆಯಿದೆ. ಈ ಯೋಜನೆ ಜಾರಿಗೊಂಡಲ್ಲಿ ಈ ಪ್ರದೇಶವೊಂದರಲ್ಲೇ 5 ಲಕ್ಷದವರೆಗಿನ ಜನಸಂಖ್ಯೆಯನ್ನು ನಿರೀಕ್ಷಿಸಬಹುದು’ ಎಂದರು. ಒಟ್ಟಾರೆಯಾಗಿ ಡಾ.ಜಿ ಪರಮೇಶ್ವರ್ ಕನಸಿಗೆ ಸರ್ಕಾರ ಹಾಗೂ ಜನತೆ ಸಹಕಾರ ನೀಡಿದಲ್ಲಿ ಮೆಟ್ರೋ ಕನಸು ಬಹುಬೇಗ ನನಸಾಗಲಿದೆ.
ತುಮಕೂರು ನೂತನ ಬಸ್ ನಿಲ್ದಾಣದ ಉದ್ಘಾಟನೆ ಯಾವಾಗ?; ಸಚಿವರ ಮಾಹಿತಿ
+ There are no comments
Add yours