ವಿದಾಯಕ್ಕೆ ಬಂದವರನ್ನು ವಿವಾಹ ಬಂಧನಕ್ಕೆ ಒಪ್ಪಿಸಿದ ಕೋರ್ಟ್!; 7 ಜೋಡಿಗಳ ಬಾಳಲ್ಲಿ ಹೊಸ ಬೆಳಕು

1 min read

 

Tumkurnews
ತುಮಕೂರು; ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ 7 ದಂಪತಿಗಳು ಪುನಃ ಒಂದಾದ ಘಟನೆ ನಡೆದಿದೆ.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ಲೋಕ್ ಅದಾಲತ್’ನಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ದಂಪತಿಗಳು ಒಂದಾಗಿದ್ದಾರೆ. ನ್ಯಾಯಾಧೀಶರು ದಂಪತಿಗಳಿಗೆ ತಿಳಿ ಹೇಳಿ, ಮನವೊಲಿಸಿದ ಪರಿಣಾಮವಾಗಿ 7 ಜೋಡಿಗಳು ಪುನಃ ಒಂದಾಗಿ ಮನೆಗೆ ಹೋದ ಘಟನೆಗೆ ನ್ಯಾಯಾಲಯದಲ್ಲಿದ್ದ ವಕೀಲರು, ಕಕ್ಷಿದಾರರು, ಸಾರ್ವಜನಿಕರು ಸಾಕ್ಷಿಯಾದರು.
ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ 7 ದಂಪತಿಗಳನ್ನು ಒಂದು ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ ಗೀತಾ, ದಂಪತಿಗಳು ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸನ್ನು ಕೆಡಿಸಿಕೊಂಡು, ಕೆಲವೊಂದು ಸಲ ಬೇರೆಯವರ ಮಾತು ಕೇಳಿ ಸಹ ನ್ಯಾಯಾಲಯಗಳಿಗೆ ವಿಚ್ಛೇದನಕ್ಕೆ, ಅಥವಾ ಜೀವನಾಂಶಗಳಿಗೆ ದಾವೆಗಳನ್ನು ಹಾಕಿದ್ದರು. ಅವರಿಗೆ ಕಳೆದ ಕೆಲವು ದಿನಗಳಿಂದ ನಮ್ಮ ನ್ಯಾಯಾಧೀಶರುಗಳು, ಎರಡೂ ಕಡೆಯ ವಕೀಲರು ಬುದ್ಧಿ ಹೇಳಿದ ಪರಿಣಾಮ ಇಂದು 7 ದಂಪತಿಗಳು ಪರಸ್ಪರ ಹಾರ ಬದಲಿಸಿಕೊಂಡು ಪರಸ್ಪರ ಸಿಹಿ ತಿನಿಸಿ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಎಂದೂ ನ್ಯಾಯಾಲಯಕ್ಕೆ ದಾವೆ ಹಾಕಿಕೊಂಡು ಬರಬೇಡಿ, ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಅವರ ಜೀವನ ಸುಖಕರವಾಗಿ, ಸಂತೋಷದಾಯಕವಾಗಿ, ನೆಮ್ಮದಿಯಾಗಿ ಇರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಸಮರಸವೇ ಜೀವನ, ಪರಸ್ಪರ ವಿರಸ ಮರೆತು ಜೀವನದಲ್ಲಿ ಹೊಂದಿಕೊಂಡು ಹೋಗಬೇಕು, ದೊಡ್ಡವರು ಸೇರಿ ಮಾಡಿದ ಮದುವೆಗೆ ಅರ್ಥ ತನ್ನಿ, ಮನಸ್ಸುಗಳನ್ನು ಕೆಡಿಸಿಕೊಳ್ಳದೆ ಸಂತೋಷವಾಗಿ ಬಾಳಬೇಕು ಎಂದರು.
ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ನ್ಯಾಯಾಧೀಶ ಎನ್.ಮುನಿರಾಜ ಮಾತನಾಡಿ, ಇಂದು ಪುನಃ ಒಂದಾದ ದಂಪತಿಗಳು ಇತರ ಪ್ರಕರಣಗಳ ದಂಪತಿಗಳಿಗೆ ಮಾದರಿಯಾಗಲಿ, ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಸಂತೋಷದಿಂದ ಜೀವನ ಕಳೆಯಬೇಕು, ಇರುವುದೊಂದೇ ಜೀವನ ಅದನ್ನು ಸಂತೋಷವಾಗಿ ಕಳೆಯಬೇಕು, ಭಗವಂತ ನೀಡಿದ ಈ ಜನ್ಮಕ್ಕೆ ಅರ್ಥ ಬರುವಂತೆ ಜೀವನ ನಡೆಸಬೇಕು, ಆಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನರಸಿಂಹಪ್ಪ, ವಕೀಲರುಗಳು, ಕಕ್ಷಿದಾರರು, ಸಾರ್ವಜನಿಕರು, ಆರಕ್ಷಕ ಸಿಬ್ಬಂದಿ ಹಾಜರಿದ್ದರು.

About The Author

You May Also Like

More From Author

+ There are no comments

Add yours