ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’:
ತುಮಕೂರು; ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.6 ರಂದು ಗುಬ್ಬಿ ತಾಲ್ಲೂಕಿನ ಹೆಚ್.ಎ.ಎಲ್‌ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಯನ್ನು ಸಾಧಿಸುವ ಮತ್ತೊಂದು ಹೆಜ್ಜೆಯಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.6ರಂದು ಕರ್ನಾಟಕದ ತುಮಕೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಹೆಚ್.ಎ.ಎಲ್) ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಈ ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು 615 ಎಕರೆ ಪ್ರದೇಶದಲ್ಲಿದೆ. ದೇಶದ ಎಲ್ಲಾ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಒಂದೇ-ಕಡೆ (ಒನ್ ಸ್ಟಾಪ್) ಪರಿಹಾರ ಒದಗಿಸುವ ದೃಷ್ಟಿಕೋನದಲ್ಲಿ ಇದನ್ನು ಯೋಜಿಸಲಾಗಿದೆ. ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವಾಗಿದೆ ಮತ್ತು ಆರಂಭದಲ್ಲಿ ಲಘು ಬಳಕೆಯ ಹೆಲಿಕಾಪ್ಟರ್‌ಗಳನ್ನು (ಎಲ್.ಯು.ಎಚ್) ತಯಾರಿಸುತ್ತದೆ.
ಎಲ್.ಯು.ಎಚ್ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ವರ್ಗದ, ಒಂದು ಇಂಜಿನ್ ಹೊಂದಿರುವ ವಿವಿಧೋದ್ದೇಶ ಬಳಕೆಯ ಹೆಲಿಕಾಪ್ಟರ್ ಆಗಿದ್ದು, ಹೆಚ್ಚಿನ ಕುಶಲತೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಆರಂಭದಲ್ಲಿ, ಈ ಕಾರ್ಖಾನೆಯು ವರ್ಷಕ್ಕೆ ಸುಮಾರು 30 ಹೆಲಿಕಾಪ್ಟರ್‌ಗಳನ್ನು ತಯಾರಿಸುತ್ತದೆ ಮತ್ತು ಹಂತ ಹಂತವಾಗಿ ಇದರ ತಯಾರಿಕಾ ಸಾಮರ್ಥ್ಯವನ್ನು ವರ್ಷಕ್ಕೆ 60 ಮತ್ತು ನಂತರ 90ಕ್ಕೆ ಹೆಚ್ಚಿಸಬಹುದು. ಮೊದಲ ಎಲ್.ಯು.ಎಚ್ ಅನ್ನು ಹಾರಾಟ ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಬಿಡುಗಡೆಗೆ ಸಿದ್ಧವಾಗಿದೆ.
ಲಘು ಯುದ್ಧ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್) ಮತ್ತು ಇಂಡಿಯನ್ ಮಲ್ಟಿರೋಲ್ ಹೆಲಿಕಾಪ್ಟರ್ (ಐ.ಎಂ.ಆರ್.ಎಚ್) ನಂತಹ ಇತರ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಕಾರ್ಖಾನೆಯನ್ನು ಭವಿಷ್ಯದಲ್ಲಿ ಎಲ್.ಸಿ.ಎಚ್, ಎಲ್.ಯು.ಹೆಚ್, ಸುಧಾರಿತ ನಾಗರಿಕ ಲಘು ಹೆಲಿಕಾಪ್ಟರ್ (ಎಲ್.ಹೆಚ್) ಮತ್ತು ಐ.ಎಂ.ಆರ್.ಹೆಚ್ ನ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆಗೆ ಸಹ ಬಳಸಲಾಗುತ್ತದೆ. ಈ ಕಾರ್ಖಾನೆಯಿಂದ ನಾಗರಿಕ ಲಘು ಬಳಕೆಯ ಹೆಲಿಕಾಪ್ಟರ್‌ಗಳ ಸಂಭಾವ್ಯ ರಫ್ತುಗಳನ್ನು ಸಹ ಮಾಡಲಾಗುತ್ತದೆ.
3-15 ಟನ್‌ಗಳ ವ್ಯಾಪ್ತಿಯಲ್ಲಿ 1,000 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಹೆಚ್.ಎ.ಎಲ್ ಯೋಜಿಸಿದೆ, 20 ವರ್ಷಗಳ ಅವಧಿಯಲ್ಲಿ ಒಟ್ಟು ನಾಲ್ಕು ಲಕ್ಷ ಕೋಟಿ ರೂ. ವ್ಯವಹಾರವನ್ನು ಯೋಜಿಸಲಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವುದರ ಜೊತೆಗೆ, ತುಮಕೂರು ಘಟಕವು ಅದರ ಸಿಎಸ್ಆರ್ ಚಟುವಟಿಕೆಗಳ ಮೂಲಕ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದ ಸಮುದಾಯ ಕೇಂದ್ರಿತ ಕಾರ್ಯಕ್ರಮಗಳೊಂದಿಗೆ ಉತ್ತೇಜಿಸುತ್ತದೆ, ಇದಕ್ಕಾಗಿ ಕಂಪನಿಯು ಗಣನೀಯ ಮೊತ್ತವನ್ನು ಖರ್ಚು ಮಾಡುತ್ತದೆ. ಇದೆಲ್ಲವೂ ಈ ಪ್ರದೇಶದ ಜನಜೀವನದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ.
ಈ ಕಾರ್ಖಾನೆ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಹೆಚ್.ಎ.ಎಲ್ ಸಮೀಪ ಇರುವುದರಿಂದ ಈ ಪ್ರದೇಶದಲ್ಲಿ ಏರೋಸ್ಪೇಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ವಸತಿ ಪ್ರದೇಶಗಳಂತಹ ಕೌಶಲ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆಯು ಹತ್ತಿರದ ಪಂಚಾಯತ್‌ಗಳಲ್ಲಿ ವಾಸಿಸುವ ಸಮುದಾಯಕ್ಕೆ ದೊರೆಯುತ್ತದೆ.
ಹೆಲಿ-ರನ್‌ವೇ, ಫ್ಲೈಟ್ ಹ್ಯಾಂಗರ್, ಅಂತಿಮ ಜೋಡಣೆ ಪ್ರದೇಶ, ನಿರ್ಮಾಣ ಜೋಡಣೆ ಪ್ರದೇಶ, ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ವಿವಿಧ ಸಂಬಂಧಿತ ಸೇವಾ ಸೌಲಭ್ಯಗಳ ಸ್ಥಾಪನೆಯೊಂದಿಗೆ, ಕಾರ್ಖಾನೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಖಾನೆಯು ಅದರ ಕಾರ್ಯಾಚರಣೆಗಳಿಗಾಗಿ ಅತ್ಯಾಧುನಿಕ ಇಂಡಸ್ಟ್ರಿ 4.0 ಮಾನದಂಡದ ಉಪಕರಣಗಳು ಮತ್ತು ತಂತ್ರಗಳನ್ನು ಹೊಂದಿದೆ.
ಈ ಕಾರ್ಖಾನೆಯ ಅಡಿಪಾಯವನ್ನು 2016 ರಲ್ಲಿ ಪ್ರಧಾನ ಮಂತ್ರಿಯವರು ಹಾಕಿದರು. ಈ ಕಾರ್ಖಾನೆಯು ಭಾರತವು ತನ್ನ ಸಂಪೂರ್ಣ ಹೆಲಿಕಾಪ್ಟರ್ ಅಗತ್ಯತೆಗಳನ್ನು ಆಮದು ಮಾಡಿಕೊಳ್ಳದೆಯೇ ಪೂರೈಸಲು ಅನುವು ಮಾಡಿಕೊಡುತ್ತದೆ ಮತ್ತು ಹೆಲಿಕಾಪ್ಟರ್ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಪ್ರಧಾನಮಂತ್ರಿಯವರ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಅಗತ್ಯವಿರುವ ಒತ್ತು ನೀಡುತ್ತದೆ.
+ There are no comments
Add yours