ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 734 ಕೋಟಿ ರೂ.ಗಳ ಪ್ರಸ್ತಾವನೆ; ಸಂಸದ ಬಸವರಾಜ್

1 min read

 

Tumkurnews
ತುಮಕೂರು; ಸಾರ್ವಜನಿಕರು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಜನಪರ ವಿದ್ಯುತ್ ಮೂಲಸೌಕರ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾಗೊಳಿಸುವಂತೆ ಜಿಲ್ಲಾ ವಿದ್ಯುಚ್ಚಕ್ತಿ ಸಮಿತಿ ಅಧ್ಯಕ್ಷ ಹಾಗೂ ಸಂಸದ ಜಿ.ಎಸ್ ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬೆಸ್ಕಾಂ ನೂತನ ವೃತ್ತ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿದ್ಯುಚ್ಚಕ್ತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ವಿದ್ಯುಚ್ಚಕ್ತಿ ಸಮಿತಿ ರಚಿಸಿದ್ದಾರೆ. ಇದೊಂದು ವರದಾನವಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸುಮಾರು 734 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಜಿಲ್ಲೆ ಕೈಗಾರಿಕೆ ಹಾಗೂ ಕೃಷಿ ಮತ್ತು ತೋಟಗಾರಿಕೆಗೆ ಪ್ರಸಿದ್ಧಿಯಾಗಿರುವ ಜಿಲ್ಲೆಯಾಗಿದೆ. ಗ್ರೇಟರ್ ನೋಯಿಡಾ ಬಿಟ್ಟರೆ, ಜಿಲ್ಲೆ ಕೈಗಾರಿಕೆಯಲ್ಲೂ ಕ್ರಾಂತಿ ಮಾಡಲಿದೆ ಎಂದರು.
ಜಿಲ್ಲೆಯ ಅಧಿಕೃತ ಹಾಗೂ ಅನಧಿಕೃತ ಕೊಳವೆಬಾವಿಗಳಿಗಾಗಿ ರೈತರು ಎಷ್ಟು ಹೂಡಿಕೆ ಮಾಡಿದ್ದಾರೆ? ಇವರಿಗೆ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಎಷ್ಟು ವೆಚ್ಚ ಮಾಡಬೇಕಿದೆ? ಇದರಿಂದ ಎಷ್ಟು ಜನರಿಗೆ ಉದ್ಯೋಗ ದೊರೆಯಲಿದೆ? ಎಷ್ಟು ಉತ್ಪಾದನೆ ಆಗಲಿದೆ? ಎಂಬ ಬಗ್ಗೆ ಒಂದು ವರದಿ ಸಿದ್ಧಪಡಿಸಿ, ರೈತರನ್ನು ಲೋಕಲ್ ಇನ್ವೆಸ್ಟರ್ ಎಂದು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ವಿಶೇಷ ಆದ್ಯತೆ ನೀಡಲು ವರದಿ ಮಾಡಬೇಕು ಎಂದು ಸೂಚಿಸಿದರು.
ಇಲ್ಲಿನ ರೈತರು ವಾಣಿಜ್ಯ ಬೆಳೆಗೆ ಒತ್ತು ನೀಡುತ್ತಿದ್ದಾರೆ. ಹೇಮಾವತಿ, ಭಧ್ರಾಮೇಲ್ದಂಡೆ, ಎತ್ತಿನಹೊಳೆ ಸೇರಿದಂತೆ ವಿವಿಧ ನದಿ ನೀರಿನಿಂದ ಅಂತರ್ಜಲ ಅಭಿವೃದ್ಧಿ ಆಗುತ್ತಿದೆ. ಜಿಲ್ಲೆಯು ದೇಶದ ಭೂಪಟದಲ್ಲಿಯೇ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಪ್ರಸಿದ್ಧಿಯತ್ತ ದಾಪುಗಾಲು ಹಾಕುತ್ತಿರುವುದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ಹಾಗೂ ಬೋರ್ ವೆಲ್ ಕೊರೆಸಿದ ತಕ್ಷಣ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಬೇಕು, ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆವಾರು ಸಮಸ್ಯೆ ಗುರುತಿಸಿ, ಸೂಕ್ತ ಯೋಜನೆಗೆ ಆದ್ಯತೆ ನೀಡಬೇಕು ಎಂದರು.
ಇದರ ಜೊತೆಗೆ ಇನ್ನೂ ಅಗತ್ಯವಿರುವ ಯೋಜನೆಗಳೊಂದಿಗೆ ಬೆಸ್ಕಾಂ, ಕೆಪಿಟಿಸಿಎಲ್, ನವೀಕರಿಸಬಹುದಾದ ಇಂಧನ ಇಲಾಖೆ, ಪವರ್ ಗ್ರಿಡ್ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲಿರುವ ಎಲ್ಲಾ ಯೋಜನೆಗಳ ನೀಲಿ ನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಭಾರತ ಸರ್ಕಾರದ ಎಲ್ಲಾ ವಿದ್ಯುತ್ ಸಂಬಂಧಿತ ಯೋಜನೆಗಳು, ಸಾರ್ವಜನಿಕರ ವಿದ್ಯುತ್ ಸೇವೆಗಳನ್ನು ಒದಗಿಸುವ ಸೌಲಭ್ಯಗಳು ಹಾಗೂ ಜಿಲ್ಲೆಯಲ್ಲಿ ವಿದ್ಯುತ್ ಕ್ಷೇತ್ರದ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನದ ಪ್ರಕ್ರಿಯೆಯಲ್ಲಿ ಜನರ ಒಳಗೊಳ್ಳುವಿಕೆ ಮತ್ತು ಮೇಲ್ವಿಚಾರಣೆ, ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟ, ನೆಟ್’ವರ್ಕ್ ನಿರ್ವಹಣೆ ಸೇರಿದಂತೆ ಉಪ-ಪ್ರಸರಣ ಮತ್ತು ವಿತರಣಾ ಜಾಲದ ಅಭಿವೃದ್ಧಿ – ಬಲಪಡಿಸುವ ಅಗತ್ಯವಿರುವ ಮತ್ತಷ್ಟು ಪ್ರದೇಶಗಳನ್ನು ಗುರುತಿಸುವುದು. ಬೆಸ್ಕಾಂ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಗ್ರಾಹಕ ಸೇವೆಗಳ ಪೂರೈಕೆಯ ಗುಣಮಟ್ಟ. ಸಾರ್ವಜನಿಕರ ದೂರುಗಳು ಮತ್ತು ಕುಂದುಕೊರತೆ ಪರಿಹಾರ ಮೊದಲಾದ ಅಂಶಗಳ ಪ್ರಗತಿಯನ್ನು ಸಂಸದರು ಪರಿಶೀಲಿಸಿದರು.
ದೇಶದಲ್ಲಿ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಹಣವನ್ನು ಒದಗಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ , ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್ (ಎಲ್ಪಿಡಿಎಸ್), ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಇತ್ಯಾದಿಗಳ ಅಡಿಯಲ್ಲಿ ಸುಮಾರು 2 ಲಕ್ಷ ಕೋಟಿಗಳನ್ನು ಒದಗಿಸಲಾಗಿದೆ. ಮತ್ತು ಪ್ರತಿ ಕುಗ್ರಾಮ ಮತ್ತು ಪ್ರತಿ ಮನೆ, ಮತ್ತು ಹೆಚ್ಚಿನ ಸಬ್ ಸ್ಟೇಷನ್ ಗಳನ್ನು ಸ್ಥಾಪಿಸಲು, ಅಸ್ತಿತ್ವದಲ್ಲಿರುವ ಸಬ್ ಸ್ಟೇಷನ್ ಗಳನ್ನು ಅಪ್ ಗ್ರೇಡ್ ಮಾಡಲು, ಹೆಚ್ಚಿನ ಒತ್ತಡ, ಕಡಿಮೆ ಒತ್ತಡ ಲೈನ್ ಗಳು, ಟ್ರಾನ್ಸ್ ಫಾರ್ಮರ್ ಗಳು ಇತ್ಯಾದಿಗಳಿಗೆ ವಿತರಣಾ ವ್ಯವಸ್ಥೆಗಳನ್ನು ಬಲಪಡಿಸಲು. ಇತ್ತೀಚೆಗೆ ಸರ್ಕಾರ ಅಗತ್ಯವಿರುವ ಕಡೆಗಳಲ್ಲಿ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅದನ್ನು ಆಧುನೀಕರಿಸಲು 3 ಲಕ್ಷ ಕೋಟಿಗಳ ಹೊಸ ಯೋಜನೆಯನ್ನು ಅನುಮೋದಿಸಿದೆ ಎಂದು ಸಂಸದರು ಹೇಳಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿದ್ಯುಚ್ಚಕ್ತಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಹಾಗೂ ಯೋಜನೆಗಳ ಪ್ರಯೋಜನ ಅರ್ಹರಿಗೆ ಸಿಗಬೇಕು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿಯೇ ಸೌರವಿದ್ಯುತ್ ಉತ್ಪಾದನೆ ಮಾಡಲು, ಸಾಧ್ಯತೆ ಇರುವ ಎಲ್ಲಾ ಸ್ಥಾವರಗಳ ಹಂತದಲ್ಲಿಯೇ ಯೋಜನೆ ಕೈಗೊಳ್ಳಲು ರೈತರ ಜಮೀನು ಅಥವಾ ಸರ್ಕಾರಿ ಜಮೀನು ಅಗತ್ಯವಿದ್ದಲ್ಲಿ ಕಂದಾಯ ಇಲಾಖೆ ಸಹಕಾರ ನೀಡುತ್ತದೆ. ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿದ್ಯಾಕುಮಾರಿ, ಅಧೀಕ್ಷಕ ಇಂಜಿನಿಯರ್ ಹಾಗೂ ಜಿಲ್ಲಾ ವಿದ್ಯುಚ್ಚಕ್ತಿ ಸಮಿತಿ ಸಂಚಾಲಕ ಲೋಕೇಶ್ ಕೆ.ಎಲ್, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಬೆಸ್ಕಾಂನ ಅಧಿಕಾರಿಗಳು, ಭಾಗವಹಿಸಿದ್ದರು.

About The Author

You May Also Like

More From Author

+ There are no comments

Add yours