Tumkurnews
ತುಮಕೂರು; ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಮೊಹಲ್ಲಾ ನಿವಾಸಿ ಜಾವದ್ ಶಿಕ್ಷೆಗೆ ಒಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ; ಇದೇ 2022ರ ಮೇ 28ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಮೊಹಲ್ಲಾದ ಪೋತರಾಜನ ಗದ್ದುಗೆ ಬಳಿ 7 ವರ್ಷದ ಮತ್ತು 9 ವರ್ಷದ ಬಾಲಕಿಯರು ಆಟವಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಜಾವದ್ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಅವರನ್ನು ಪಾರ್ಕ್ ಮೊಹಲ್ಲಾ ಮುಸ್ಲಿಂ ಸ್ಮಶಾನದ ಹಿಂಭಾಗ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
ತಾಯಿಯಿಂದ ದೂರು; ನೊಂದ ಬಾಲಕಿಯ ತಾಯಿ ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಪಿ.ಎಸ್.ಐ ಲಕ್ಷ್ಮೀನಾರಾಯಣ್ ಪ್ರಕರಣವನ್ನು ದಾಖಲಿಸಿ ತನಿಖಾಧಿಕಾರಿಗಳಾದ ವಿ.ಲಕ್ಷ್ಮಯ್ಯ ಪಿ.ಐ ಅವರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಜಿಲ್ಲಾ ಸತ್ರ ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಅಪರಾಧ ಸಾಬೀತಾಗಿದೆ.
12 ವರ್ಷ ಜೈಲು; ಅಪರಾಧಿ ಜಾವದ್’ಗೆ ಕಲಂ 363 ಐಪಿಸಿಗೆ 5 ವರ್ಷ ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ಕಲಂ 9(ಎಂ) ಅಡಿ 7 ವರ್ಷ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಸತ್ರ ಪೋಕ್ಸೋ ವಿಶೇಷ ನ್ಯಾಯಾದೀಶೆ ಸಂದ್ಯಾರಾವ್ ಪಿ., ಅವರು ತೀರ್ಪು ನೀಡಿದ್ದಾರೆ. ಸಂತ್ರಸ್ತರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಆಶಾ ಕೆ.ಎಸ್ ವಾದ ಮಂಡಿಸಿದ್ದರು. ಪ್ರಕರಣ ನಡೆದು ಕೇವಲ 6 ತಿಂಗಳಲ್ಲಿ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಾಲಯವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದಂತಾಗಿದೆ.
+ There are no comments
Add yours