ತುಮಕೂರು; ಕನಕದಾಸ, ಒನಕೆ ಓಬವ್ವ ಜಯಂತಿಗೆ ಜಿಲ್ಲಾಡಳಿತದಿಂದ ದಿನಾಂಕ ನಿಗದಿ

1 min read

 

ಕನಕದಾಸ, ಒನಕೆ ಓಬವ್ವ ಜಯಂತಿಗೆ ದಿನಾಂಕ ನಿಗದಿ

Tumkurnews
ತುಮಕೂರು; ಜಿಲ್ಲಾಡಳಿತದ ವತಿಯಿಂದ ನವೆಂಬರ್ 11ರಂದು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನಕದಾಸರ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ನವೆಂಬರ್ 11ರ ಬೆಳಿಗ್ಗೆ 11 ಗಂಟೆಗೆ ಕನಕ ಜಯಂತಿ ಹಾಗೂ ಮಧ್ಯಾಹ್ನ 3 ಗಂಟೆಗೆ ಒನಕೆ ಓಬವ್ವ ಜಯಂತಿಯನ್ನು ಆಚರಿಸಲಾಗುವುದು ಎಂದರು.
ಕನಕದಾಸರ ಜಯಂತ್ಯುತ್ಸವದ ಅಂಗವಾಗಿ 5 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲು ಅರ್ಹರನ್ನು ಗುರುತಿಸಿ ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಹಾಗೂ ಕನಕದಾಸರ ವಿಚಾರಧಾರೆಗಳ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಬೇಕೆಂದು ಸಮಿತಿ ಸದಸ್ಯರಿಗೆ ತಿಳಿಸಿದರು.
ಅದೇ ರೀತಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಐವರು ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಎರಡೂ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸುವ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಳ್ಳುವ ವ್ಯವಸ್ಥೆ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಕುರುಬ ಸಮಾಜದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡಿ, ಕಳೆದೆರಡು ವರ್ಷದಲ್ಲಿ ಕೊರೋನಾ ಸಂಕಷ್ಟ, ನೆರೆ ಹಾವಳಿಯಿಂದ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನಗರದ ಶಿರಾಗೇಟ್ ಬಳಿ ಕನಕ ವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ನವೆಂಬರ್ 11ರ ಬೆಳಿಗ್ಗೆ 9 ಗಂಟೆಗೆ ಪೂಜೆ ಸಲ್ಲಿಸಿ ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ಮೆರವಣಿಗೆ ಪ್ರಾರಂಭಿಸಲಾಗುವುದು. ಮೆರವಣಿಗೆಯು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ ತಲುಪಲಿದೆ ಎಂದು ಸಭೆಗೆ ತಿಳಿಸಿದರು.
ಛಲವಾದಿ ಸಮುದಾಯದ ಪದಾಧಿಕಾರಿಗಳು ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 20ರಂದು ಆಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ. ಅಜಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಕ್ಷಿತ್, ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.

About The Author

You May Also Like

More From Author

+ There are no comments

Add yours